ಮಿಡತೆಗಳಿಂದ ಕೃಷಿಗೆ ಉಂಟಾಗುವ ಹಾನಿ ತಪ್ಪಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ

ಮಂಡ್ಯ: ರಾಜ್ಯದ ವಿವಿದೆಡೆ ಮಿಡತೆ ಹಾವಳಿಯುಂಟಾಗಿದ್ದು ಮಿಡತೆಗಳಿಂದ ಕೃಷಿ ಬೆಳೆಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವ ಅಗತ್ಯವಾದ ಮುನ್ನೆಚ್ಚರಿಕೆ ಹಾಗೂ ಹತೋಟಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮರುಭೂಮಿ ಮಿಡತೆ ಅಥವಾ ಸಣ್ಣ ಕೊಂಬಿನ ಮಿಡತೆಯಿಂದ ಕೃಷಿ ಬೆಳೆಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಹತೋಟಿ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮಾತನಾಡಿದರು.

READ ALSO

ಮರುಭೂಮಿ ಮಿಡತೆಯನ್ನು ಸಣ್ಣ ಕೊಂಬಿನ ಮಿಡತೆ ಯೆಂದು ಕರೆಯುತ್ತಾರೆ. ಇದು ವಿಶ್ವದ ಅತ್ಯಂತ ವಿನಾಶಕಾರಕ ಕೀಟಗಳಲ್ಲೊಂದಾಗಿದೆ. ಇದು ಹೆಚ್ಚು ಸಕ್ರಿಯವಿರುವ ಕೀಟವಾಗಿದ್ದು, ಬೆಳೆಗಳು, ಹುಲ್ಲುಗಾವಲು ಮರದರೆಂಬೆ, ಕಾಂಡ ಮತ್ತು ಹಸಿರೆಲೆಯನ್ನು ಸಂಪೂರ್ಣವಾಗಿ ತಿಂದು ನಾಶಮಾಡುತ್ತದೆ ಎಂದರು.

ಪ್ರಮುಖವಾಗಿ ಗಾಳಿಯ ದಿಕ್ಕನ್ನೆ ಅವಲಂಬಿಸಿ ಮುನ್ನಗ್ಗುವ ಈ ಕೀಟ ಹಾದಿಯಲ್ಲಿ ಯಾವ ಆಹಾರವನ್ನು ಬಿಡದೆ ತಿನ್ನುತ್ತದೆ. ಮಿಡತೆಯ ಹಿಂಡು ಕರ್ನಾಟಕಕ್ಕೆ ಬರುವುದಿಲ್ಲ. ರಾಜ್ಯಕ್ಕೆ ಆಕಸ್ಮಿಕವಾಗಿ ಪ್ರವೇಶಿಸಿದರೆ ಕೃಷಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತುಂಬಾ ಜಾಗೃತರಾಗಿರಿ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಮತ್ತು ಇದರ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕೆ ಹೊರತು ಯಾವುದೇ ರೀತಿಯಲ್ಲಿಯೂ ಆತಂಕ ಮೂಡಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುನ್ನೆಚ್ಚರಿಕೆ ಕ್ರಮಗಳು ಮತ್ತು ಹತೋಟಿ ಕ್ರಮಗಳು:-

ಗಾಳಿಯ ದಿಕ್ಕು ಆಧಾರಿಸಿ ಇವುಗಳು ಚಲಿಸುವುದರಿಂದ ಇವುಗಳ ಚಲನ ವಲನಗಳ ಮೇಲೆ ನಿಗಾ ವಹಿಸುವುದು, ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದ ಕೀಟವನ್ನು ಬೇರೆಡೆಗೆ ಓಡಿಸಬಹುದು, ಬೇವಿನ ಮೂಲದ ಕೀಟನಾಶಕಗಳನ್ನು ಬೆಳೆಗಳಲ್ಲಿ ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದು ಕಡಿಮೆ ಆಗುತ್ತದೆ ಎಂದು ತಿಳಿಸಿದರು.

ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಸೂಕ್ತ ರಸಾಯನಿಕಗಳನ್ನು ಬಳಸಿ ಕೀಟಗಳ ಹತೋಟಿ ಮಾಡಬಹುದು. ಈ ಕುರಿತು ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಚಂದ್ರ ಶೇಖರ್, ತೋಟಗಾರಿಕೆ ಉಪನಿರ್ದೇಶಕ ರಾಜು, ರೇಷ್ಮೆ ಇಲಾಖೆ ಉಪನಿರ್ದೇಶಕಿ ಪ್ರತಿಭಾ, ಕೃಷಿ ಮಹಾವಿದ್ಯಾಲಯದ ಸಹಾಯಕಚಪ್ರಾಧ್ಯಾಪಕ ಡಾ.ವಿಜಯ್‍ಕುಮಾರ್ ಸೇರಿದಂತೆ ಉಪ ಕೃಷಿ ನಿರ್ದೇಶಕರು ಉಪಸ್ಥಿತರಿದ್ದರು.