ಹರಿಯುವ ನೀರಿನ ಜುಳು ಜುಳು ನಾದವ ಆಲಿಸಿ ಕೊಂಡು ಹೋದರೆ ನಿಸರ್ಗದ ಸಹಜ ಸಂಗೀತ ನಿನಾದದ ‘ ಹುಟ್ಟು ‘ ಗುಟ್ಟುಗಳನ್ನು ಅರಿಯಬಹುದು. 🖊️• ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ (ರಿ.)

ಅಡವಿಯ ಎಡೆಯಲ್ಲಿ ಗಿಡಗಳ ನಡುವಲ್ಲಿ ನೊರೆಗಳ ಪುಟಿ ಸುತ ಕುಣಿ ಕುಣಿ ದಾಡುತ ಹರಿಯುವ ನೀರಿನ ಜುಳು ಜುಳು ನಾದವ ಆಲಿಸಿ ಕೊಂಡು ಹೋದರೆ ನಿಸರ್ಗದ ಸಹಜ ಸಂಗೀತ ನಿನಾದದ ‘ ಹುಟ್ಟು ‘ ಗುಟ್ಟುಗಳನ್ನು ಅರಿಯಬಹುದು. ಅದು ಕೇವಲ ನೀರಿನ ಹರಿವು ಅಲ್ಲ, ಆದು ಅಡವಿಯ ಜೀವಂತಿಕೆಯ ನರ ನಾಡಿ, ನಾಡಿನ ಸಮಸ್ತ ಜನತೆಯ ಬದುಕಿನ ಚೇತನಾ ಶಕ್ತಿ ಎಂಬ ಜಲನಾಡಿ. ಪಶ್ಚಿಮ ಘಟ್ಟದ ದಟ್ಟ ಅಡವಿಯ ಒಳಗೆ ನದಿ ಕಣಿವೆಯ ನೀರಿನ ಹರಿವು ಪ್ರದೇಶವನ್ನು ಶೋಧಿಸುತ್ತಾ ಹೋದಂತೆಯೇ ಅತ್ಯಮೂಲ್ಯವಾದ ನೈಸರ್ಗಿಕ ಸೂಕ್ಷ್ಮ ವಿಚಾರಗಳು ಒಂದೊಂದಾಗಿ ಪುಟ ತೆರೆಯುತ್ತಾ ಹೋಗುತ್ತವೆ. ಅಲ್ಲಿ ಎಲ್ಲವೂ ನಿಗೂಢ, ಎಲ್ಲವೂ ಅಗಾಧ. ಪ್ರತೀ ಹೆಜ್ಜೆಯಲ್ಲೂ ಕಲಿಯುವಂತದ್ದು ತುಂಬಾ ಇರುತ್ತವೆ.

READ ALSO

ಮೇಲ್ನೋಟಕ್ಕೆ ಹಚ್ಚ ಹಸುರಿನ ದಟ್ಟ ಅಡವಿ, ಒಳನೋಟದಲ್ಲಿ ಜೀವ ವೈವಿಧ್ಯತೆಗಳ ಭದ್ರ ಬದುಕಿನ ಸಂಕೀರ್ಣ. ನೀರಿನ ಅಂಚಿನಲ್ಲಿ ಕಲ್ಲಿಗೆ ಅಂಟಿರುವ ಪಾಚಿ, ಶಿಲೀಂಧ್ರ ಗಳಿಂದ ಹಿಡಿದು ಆಕಾಶವನ್ನು ಚುಚ್ಚಿ ನಿಂತ ಮರಗಳವರೆಗೆ , ತರಗೆಲೆಗಳ ಎಡೆಯಲ್ಲಿ ಇರುವ ಇರುವೆಯಿಂದ ಹಿಡಿದು ನೀರಿನ ಪಥದಲ್ಲಿ ಸಾಗುವ ಆನೆಗಳವರೆಗೆ ಒಂದಕ್ಕೊಂದು ಅವಿನಾಭಾವ ಸಂಬಂಧ ಇದೆ. ಜೀವ ಸಂಕಲೆಯ ಈ ಅಗೋಚರ ಪ್ರಭಾವಳಿಯ ಪ್ರಭೆಯು ನಾಡಿನ ಯಾವ ಮೂಲೆಗೂ ಪ್ರಭಾವ ಬೀರುವ ಶಕ್ತಿ ಇರುವಂತದ್ದು. ಪಶ್ಚಿಮ ಘಟ್ಟದ ಶೋಲಾ ಅರಣ್ಯದಲ್ಲಿ ಹರಿಯುವ ಈ ಜಲ ನಾಡಿಗಳು ಮಳೆ ನೀರನ್ನು ಇಂಗಿಸಿಕೊಂಡು ವರ್ಷ ಪೂರ್ತಿ ಹೊಳೆಯನ್ನು ಜೀವಂತ ಆಗಿ ಇರಿಸಿಕೊಳ್ಳುವ ಸಾಮರ್ಥ್ಯ ಇರುವಂತವು. ವರ್ಷಪೂರ್ತಿ ಈ ಅರಣ್ಯದ ಎಲೆಗಳು ಸೂರ್ಯನ ಕಿರಣ ನೆಲಕ್ಕೆ ಬೀಳದ ದಟ್ಟ ಅಡವಿ ಒಳಗೆ ಬಿದ್ದಾಗ ತರಗೆಲೆಗಳು ಅಲ್ಲಿನ ಸದಾ ಒರತೆ ಉಳ್ಳ ಮಣ್ಣಿಗೆ ಬಿದ್ದಾಗ ಆ ಮಣ್ಣು ಸ್ಪಂಜಿನಂತೆ ಇದ್ದು ನೀರನ್ನು ಹಿಡಿದಿಟ್ಟು ಕೊಳ್ಳುತ್ತವೆ. ಹೀಗೆ ಸಂಗ್ರಹ ಆದ ನೀರು ಹಂತ, ಹಂತವಾಗಿ ಒಂದು ಮಳೆಗಾಲದಿಂಡ ಇನ್ನೊಂದು ಮಳೆಗಾಲದ ವರೆಗೆ ನದಿಗೆ ಹರಿಯುತ್ತಾ ಇದ್ದು ಅಲ್ಲಿನ ನೈಸರ್ಗಿಕ ವ್ಯವಸ್ಥೆ ಒಂದು ಅಗೋಚರ ತಾಂತ್ರಿಕ ರೀತಿಯಲ್ಲಿ ಇರುತ್ತವೆ.

ನಡೆಯುತ್ತಾ ಹೋಗುವಾಗ ಕಾಲಿಗೆ ರಕ್ತದ ತಿಲಕ ಇಡುವ ಜಿಗಣೆಗಳು, ನೀರಿಗೆ ಚಂಗನೆ ಜಿಗಿಯವ ಕಪ್ಪೆಗಳು, ತರ ಗೆಲೆಗಳ ಒಳಗೆ ಸಂಚರಿಸುವ ಇರುವೆಗಳು, ನೀರಿನ ಅಂಚಿನಲ್ಲಿ ಇರುವ ಪಾಚಿಗಳು, ನೀರಿನ ಇಕ್ಕಡೆ ಇರುವ ಹುಲ್ಲುಗಳು, ಒಂದು ಕಡೆ ಒಂದು ಗೆಲ್ಲನ್ನು ಎಳೆದರೆ 30 ಅಡಿ ದೂರದಲ್ಲಿ ಆಗುವ ಸಂಚಲನದ ನೀರಿಗೆ ಸ್ಪರ್ಶಿಸುವ ಬೀಳುಗಳು, ನೀರಿನ ಮೇಲೆ ಹಾರಾಡುವ ಸಣ್ಣ ಕೀಟಗಳು, ನೀರಲ್ಲಿ ಕೊಳೆತ ಎಲೆಗಳಲ್ಲಿ ಇರುವ ಶಿಲೀಂಧ್ರಗಳು, ಬೀಜ ಸಿಂಚನದ ಮೂಲಕ ಕಾಡಿನ ಬೆಳವಣಿಗೆಗೆ ಪಾತ್ರವಾಗುವ ಹಾರ್ನ್ ಬಿಲ್, ಸಿಂಗಲೀಕ, ಮುಸುವ, ಲದ್ದಿ ಹಾಕುವ ಆನೆ, ಸೆಗಣಿ ಹಾಕುವ ಕಾಟಿ, ಹಿಕ್ಕೆ ಹಾಕುವ ಎಲ್ಲವೂ ಪಶ್ಚಿಮ ಘಟ್ಟದ ನೀರಿನ ಮತ್ತು ಅರಣ್ಯದ ಸಂರಕ್ಷಣೆಯ ಪಾತ್ರಧಾರಿಗಳು. ಇದು ಕನ್ಯಾಕುಮಾರಿಯಿಂದ ಗುಜರಾತ್ ತಪತಿ ನದೀ ಕಿನಾರೆ ವರೆಗಿನ 1600 ಕಿ. ಮೀ ನಷ್ಟು ಉದ್ದಕ್ಕೂ ಇರುವಂತದ್ದು. ಮಳೆ, ಹೊಳೆ, ಕಾಡು, ಕಣಿವೆ, ಗಿರಿ, ಝರಿ ಇವೆಲ್ಲವೂ ಒಂದಕ್ಕೊಂದು ಅವಲಂಬಿತವಾಗಿ ಇದ್ದ ಕಾರಣ ಮಳೆ ಕಾಲ, ಕಾಲಕ್ಕೆ ಬರುವಂತಿದೆ. ಆದರೆ ಮನುಜ ಸಂತಾನದ ‘ ಅಭಿವೃದ್ದಿ ‘ ಪರ ಯೋಜನೆಗಳು ಇಂದು ಪಶ್ಚಿಮ ಘಟ್ಟ ದ ಸೂಕ್ಷ್ಮ ಪ್ರದೇಶಕ್ಕೆ ಹಿಂಸೆ ನೀಡುತ್ತಾ ಬಂದಿದ್ದರೂ ಸಹನಾ ಸ್ವರೂಪಿ ಪ್ರಕೃತಿ ಮಾತೆ ಎಲ್ಲವನ್ನೂ ಸಹಿಸಿಕೊಂಡು ಬಂದಿರುತ್ತಾಳೆ. ಮನುಜರ ಹಿಂಸೆ, ದೌರ್ಜನ್ಯ ಎಷ್ಟೇ ಇದ್ದರೂ ಮಳೆಗಾಲ ಯಾವತ್ತಿಗೂ ಪೋಸ್ಟ್ ಪೋನ್ ಆಗಿಲ್ಲ.
ಇದು ಮೊನ್ನೆ ಶಿಬಾಜೆ ರಕ್ಷಿತಾರಣ್ಯದಲ್ಲಿ ನೇತ್ರಾವತಿಯ ಉಪನದಿ ಕಪಿಲಾ ನದಿಯ ಹರಿವಿನ ಪಥದಲ್ಲಿ ಹೆಜ್ಜೆ ಹಾಕುತ್ತಾ ಹೋದಾಗ ಕಂಡ ದೃಶ್ಯಗಳು.

🖊️• ದಿನೇಶ್ ಹೊಳ್ಳ
ಸಹ್ಯಾದ್ರಿ ಸಂಚಯ ( ರಿ. )