
ಬೆಳ್ತಂಗಡಿ: ಕೊರೋನಾ ಮಹಾಮಾರಿಯ ಬೆನ್ನಲೆ ಕಾಡುತ್ತಿದೆ ಡೆಂಗ್ಯೂ ಪ್ರಕರಣಗಳು. ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ನಿರ್ದೇಶನದಲ್ಲಿ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕಡಿರುದ್ಯಾವರ ಪಂಚಾಯತ್ ಹಾಗೂ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದಲ್ಲಿ ಮಾಸ್ಟರ್ ಲಾರ್ವಾ ಸರ್ವೇಯನ್ನು ನಡೆಸಲಾಯಿತು.
ಮುಂಡಾಜೆ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯಾ ಹಾಗೂ ತಾಲೂಕು ಆರೋಗ್ಯ ಸಹಾಯಕ ಗಿರೀಶ್ ನೇತ್ರತ್ವ ವಹಿಸಿದ್ದರು.

ಮಾಸ್ಟರ್ ಲಾರ್ವಾ ಸರ್ವೇ:
ಮಳೆಗಾಲ ಆರಂಭಕ್ಕೆ ಆಯಾಯ ಗ್ರಾಮದ ವಾರ್ಡ್ ನ ಕಿರಿಯ ಆರೋಗ್ಯ ಸಹಾಯಕಿಯರು,ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇ ನಡೆಸುತ್ತಾರೆ. ಆದರೆ ಈಗ ಪ್ರಕರಣಗಳು ಅಧಿಕಗೊಳ್ಳುತ್ತಿರುವ ಕಾರಣ, ಮುಂಡಾಜೆ ಪ್ರಾ.ಆ.ಕೇಂದ್ರದ 5 ಉಪ ಆರೋಗ್ಯ ಕೇಂದ್ರಗಳ ಕಿರಿಯ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರನ್ನು ಒಂದೆಡೆ ಸೇರಿಸಿ ಇಲ್ಲಿ ಮಾಸ್ಟರ್ ಲಾರ್ವಾ ಸರ್ವೇ ನಡೆಸಲಾಯಿತು. ಇವರು ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಲಾರ್ವಾ ಉತ್ಪತ್ತಿಯಾಗುವ ಸ್ಥಳಗಳನ್ನು ಪತ್ತೆ ಹಚ್ಚಿ ಮುನ್ನೆಚ್ಚರಿಕೆ ಕೈಗೊಳ್ಳುತ್ತಾರೆ.

“ನೀರು ನಿಲ್ಲದಂತೆ ಎಚ್ಚರ ವಹಿಸಿ”
“ಈಗಾಗಲೇ ಈ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಹಿತಿ ಶಿಬಿರ, ಲಾರ್ವಾ ಸಮೀಕ್ಷೆ ನಡೆಸಲಾಗಿದೆ. ಈ ಬಾರಿ ಮಳೆಗಾಲ ಇನ್ನೂ ಕೂಡ ಸರಿಯಾಗಿ ಆರಂಭವಾಗದ ಕಾರಣ ಈಗಿನ ಮಳೆ ಬಿಸಿಲಿನ ವಾತಾವರಣ ಲಾರ್ವಾ ಉತ್ಪತ್ತಿಗೆ ಪೂರಕವಾಗಿದೆ. ಸಾರ್ವಜನಿಕರು ತಮ್ಮ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಸ್ವಚ್ಛತೆ ಕಾಪಾಡುವುದು ಅತೀ ಅಗತ್ಯ”
ಡಾ.ಕಾವ್ಯಾ,
ವೈದ್ಯಾಧಿಕಾರಿ,
ಪ್ರಾ.ಆ.ಕೇಂದ್ರ, ಮುಂಡಾಜೆ
ಎಲ್ಲೆಂದರಲ್ಲಿ ಎಸೆಯುತ್ತಿರುವ ತ್ಯಾಜ್ಯ:
ಕಡಿರುದ್ಯಾವರ ಗ್ರಾಮದ ಮುಖ್ಯ ರಸ್ತೆ ಬದಿಗಳ ಮನೆಗಳಿರುವ ಪ್ರದೇಶದಲ್ಲಿ ಹಲವು ಸಮಯದಿಂದ ಇರುವ ಬಾಟಲಿ, ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯ ತಂದು ಹಾಕಿದ್ದು ಅದನ್ನು ವಿಲೇವಾರಿ ಮಾಡಲಾಗಿಲ್ಲ.ಇದು ಸಾಂಕ್ರಾಮಿಕ ರೋಗ ಹರಡಲು ಮೂಲ ಕಾರಣವೆಂದು ಸ್ಥಳೀಯರು ಹೇಳುತ್ತಿದ್ದಾರೆ.
