ಪಾಕಿಸ್ಥಾನದ ಟಿ20 ವಿಶ್ವಕಪ್ ಟ್ರೋಫಿ ಕನಸು ಭಗ್ನಗೊಳಿಸಿ ಪೈನಲ್ ಪ್ರವೇಶಿಸಿದ ಕಾಂಗರೂ ಪಡೆ! ಪಾಕಿಸ್ತಾನದ ವಿರುದ್ಧ ಐದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ನಡೆದ ಎರಡನೇ ಸೆಮಿಪೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶಿಸಿದೆ. 

ಈ ಮೂಲಕ ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ, ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಅತ್ತ ಪಾಕಿಸ್ತಾನದ ಎರಡನೇ ಟಿ20 ವಿಶ್ವಕಪ್ ಟ್ರೋಫಿ ಕನಸು ಭಗ್ನಗೊಂಡಿದೆ. 

READ ALSO

ಇದೀಗ ಭಾನುವಾರ ದುಬೈಯಲ್ಲಿ ನಡೆಯಲಿರುವ ಪ್ರಶಸ್ತಿಗಾಗಿನ ಹೋರಾಟದಲ್ಲಿ ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕಿವೀಸ್ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. 

ಮೊಹಮ್ಮದ್ ರಿಜ್ವಾನ್ (67) ಹಾಗೂ ಫಖರ್ ಜಮಾನ್ (55) ಬಿರುಸಿನ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 176 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ (49), ಮಾರ್ಕಸ್ ಸ್ಟೋಯಿನಿಸ್ (40) ಹಾಗೂ ಮ್ಯಾಥ್ಯೂ ವೇಡ್ (41) ದಿಟ್ಟ ಹೋರಾಟದ ನೆರವಿನಿಂದ ಇನ್ನೂ ಆರು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.