ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತಗಳು ಉಂಟಾಗಿದ್ದು ಈ ರಸ್ತೆಯಲ್ಲಿ 7/08/2020ರಿಂದ 11/08/2020ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ಹೆಚ್ಚಿನ ಮಳೆ ಹಾಗೂ ಗಾಳಿ ಬೀಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ 234 ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ರಸ್ತೆಯ ಮಾರ್ಗದಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಈ ಮಾರ್ಗದಲ್ಲಿ ಈಗಾಗಲೇ ಕೆಲವು ವಾಹನಗಳು ಸಂಚರಿಸಲು ಕಷ್ಟವಾಗಿರುತ್ತದೆ ಈ ಮಾರ್ಗವು ಹೆಚ್ಚಾಗಿ ತಿರುವುಗಳಿಂದ ಕೂಡಿದ್ದು ವಾಹನಗಳ ಸಂಚಾರವು ಸಹ ಹೆಚ್ಚಾಗಿರುತ್ತದೆ. ಈ ರೀತಿ ಮಳೆ ಹಾಗೂ ಗಾಳಿ ಬೀಸುವುದು ಮುಂದುವರೆದರೆ ಈ ಮಾರ್ಗದಲ್ಲಿರುವ ದಟ್ಟವಾದ ಗುಡ್ಡಗಳು ಹೆಚ್ಚಿನ ಸಂಖ್ಯೆಯಲ್ಲಿ ಕುಸಿದು ವಾಹನಗಳ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅಡಚಣೆ ಉಂಟಾಗುತ್ತದೆ ಆದುದರಿಂದ ಮುಂದಿನ ನಾಲ್ಕು ದಿನಗಳ ಕಾಲ ಪರ್ಯಾಯ ರಸ್ತೆ ಗಳಾದ ಮೂಡಿಗೆರೆ ಸಕಲೇಶಪುರ ಗುಂಡ್ಯ ಮಾರ್ಗವಾಗಿ ಸಂಚರಿಸಲು ತಿಳಿಸಿರುತ್ತಾರೆ.