ಬೆಂಗಳೂರು: ಇದೇ 21 ರಿಂದ 1 ರಿಂದ 5ನೆ ತರಗತಿವರೆಗಿನ ಶಾಲೆಗಳು ಆರಂಭವಾಗಲಿದ್ದು, ಶಾಲೆಯಲ್ಲೇ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ತಜ್ಞರ ಸಲಹೆ ಪಡೆದು ಶಾಲೆ ಆರಂಭಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇಂದು ಸಂಜೆ ವೇಳೆಗೆ ತಾಂತ್ರಿಕ ಸಲಹಾ ಸಮಿತಿ ವರದಿ ಕೈ ಸೇರಲಿದ್ದು, ನಂತರ ಶಾಲೆ ಆರಂಭ ಮಾಡಲಾಗುವುದು ಎಂದು ಅವರು ಹೇಳಿದರು.
ಶಾಲೆ ಆರಂಭದ ಬೆನ್ನಲ್ಲೇ ಮಕ್ಕಳಿಗೆ ಲಸಿಕೆ ಸಿಗುತ್ತಿರುವುದು ಸಿಹಿ ಸುದ್ದಿ. ಶಾಲೆ ಆರಂಭದ ವೇಳೆಗೆ ಮಕ್ಕಳ ಲಸಿಕೆ ಲಭಿಸಿದರೆ ಶಾಲೆಗಳಲ್ಲೇ ಮಕ್ಕಳಿಗೆ ಲಸಿಕೆ ಕೊಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದರು. ಮತ್ತಷ್ಟು ದಿನ ಅವರು ಶಿಕ್ಷಣದಿಂದ ಹೊರಗುಳಿದರೆ ಬಾಲ ಕಾರ್ಮಿಕರಾಗುವ ಸಾಧ್ಯತೆ ಇರುವುದರಿಂದ ಶೀಘ್ರ ಶಾಲೆ ಆರಂಭಿಸಬೇಕು. ಇದರಿಂದ ಪೋಷಕರ ಆತಂಕವೂ ನಿವಾರಣೆಯಾಗಲಿದೆ ಎಂದರು.