ಲಾರಿಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿ ಬಸ್ ಗೆ ಬೆಂಕಿ ತಗುಲಿ ಇಬ್ಬರು ಮಹಿಳೆಯರು ಸಜೀವ ದಹನ

ಬಾಗಲಕೋಟೆ: ಲಾರಿಗೆ ಡಿಕ್ಕಿ ಹೊಡೆದು ಮಿನಿ ಬಸ್ ಪಲ್ಟಿಯಾಗಿ ಬೆಂಕಿ ತಗುಲಿದ್ದು, ಬಸ್ ನಲ್ಲಿದ್ದ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಸಮೀಪ ಮುಧೋಳ -ಯಾದವಾಡ ರಸ್ತೆಯಲ್ಲಿ ಘಟನೆ ನಡೆದಿದೆ. ಈರವ್ವ ಗಾಣಿಗೇರ(70), ಅಣ್ಣವ್ವ ಗಾಣಿಗೇರ(58) ಮೃತಪಟ್ಟವರು ಎಂದು ಹೇಳಲಾಗಿದೆ.

READ ALSO

ಇವರು ಬೆಳಗಾವಿ ಜಿಲ್ಲೆ ಯಾದವಾಡ ಗ್ರಾಮದವರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮಕ್ಕೆ ಮಿನಿ ಬಸ್ ನಲ್ಲಿ ಮದುವೆಗೆ ತೆರಳಿದ್ದ ಅವರು ಮದುವೆ ಮುಗಿಸಿ ಹಿಂತಿರುಗುವಾಗ ಅಪಘಾತವಾಗಿದೆ.

ಮಿನಿ ಬಸ್ ಉರುಳಿ ಬಿದ್ದ ರಭಸಕ್ಕೆ ಬೆಂಕಿ ತಗುಲಿದ್ದು, ಇಡೀ ಬಸ್ ಗೆ ವ್ಯಾಪಿಸಿದೆ. ಕೆಲವರು ಬಸ್ ನಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಬಸ್ ಹೊತ್ತಿ ಉರಿದಿದೆ.

ಇದರಿಂದಾಗಿ ಹೊರಬರಲಾರದೆ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.