ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವೇಣೂರು ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ಭೀಕರ ಸ್ಫೋಟ ಸಂಭವಿಸಿ ಮೂವರು ಸಾವನ್ನಪ್ಪಿದ್ದು ಹಾಗೂ ಈ ಘಟನೆಯಿಂದ ಹಲವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
Solid fire works ಎಂಬ ನಾಮಾಂಕಿತ ಪಟಾಕಿ ಗೋದಾಮಿನಲ್ಲಿ ಸ್ಫೋಟಗೊಂಡಿದ್ದು, ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.ಕುಚ್ಚೋಡಿ ಸಮೀಪದ ನಿವಾಸಿ ಬಶೀರ್ ಎಂಬವರ ಜಮೀನಿನಲ್ಲಿ ಪಟಾಕಿ ತಯಾರಿಸುತ್ತಿದ್ದರು.
ಇಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು.ಈ ಪೈಕಿ ತ್ರಿಶೂತಿನ ವರ್ಗೀಸ್, ಹಾಸನ ಅಮಖನಾಯಕನಹಳ್ಳಿ ಚೇತನ್, ಕೇರಳದ ಸ್ವಾಮಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಉಳಿದಂತೆ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಕೇರಳ ಇಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದರು
ಬಶೀರ್ ಎಂಬುವವರಿಗೆ ಸೇರಿದ ಸಾಲಿಡ್ ಫೈರ್ ವರ್ಕ್ಸ್ ಪಟಾಕಿ ಗೋದಾಮಿನಲ್ಲಿ ಅವಘಡ ನಡೆದಿದೆ. ಮೃತಪಟ್ಟ ಮೂವರು ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟಕ ತಯಾರಿಸುತ್ತಿದ್ದರು. ಈ ಪೈಕಿ ಓರ್ವನ ಮೃತದೇಹ ದೊರೆತಿದ್ದು, ಇನ್ನಿಬ್ಬರ ದೇಹ ಸ್ಫೋಟದ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ.
ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರೂ,ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ದುರ್ಘಟನೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ತನಿಖೆಯ ನಂತರ ಸ್ಫೋಟದ ನಿಖರ ಕಾರಣ ತಿಳಿದು ಬರಬೇಕಾಗಿದೆ.
ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಸಾಧ್ಯತೆಯಿದೆ.