ಬಿಟ್ ಕಾಯಿನ್, ಕ್ರಿಪ್ಟೊಕರೆನ್ಸಿ ಯುವಕರನ್ನು ಹಾಳು ಮಾಡದಂತೆ ನೋಡಿಕೊಳ್ಳಲು ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಬೇಕು: ಪ್ರಧಾನಿ ಮೋದಿ ಕರೆ

ನವದೆಹಲಿ: ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಕ್ರಿಪ್ಟೊಕರೆನ್ಸಿಗಳ ಮೇಲೆ ಒಟ್ಟಾಗಿ ಕೆಲಸ ಮಾಡಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಅವರು ಇಂದು ವರ್ಚುವಲ್ ಮೂಲಕ ಭಾರತ-ಸಿಡ್ನಿ ಮಾತುಕತೆಯನ್ನುದ್ದೇಶಿಸಿ ಮಾತನಾಡಿ, ಲಕ್ಷಾಂತರ ಭಾರತೀಯರು ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡುತ್ತಿರುವಾಗ ಸಾಗರೋತ್ತರ ಹೂಡಿಕೆಗಳನ್ನು ನಿರ್ವಹಿಸಲು ನಿಯಂತ್ರಣಾ ಚೌಕಟ್ಟಿನ ಅಗತ್ಯತೆ ಬಗ್ಗೆ ಸರ್ಕಾರ ಪರಿಗಣಿಸುತ್ತಿದೆ ಎಂದು ಹೇಳಿದರು.

READ ALSO

ಭಾರತದ ಉದ್ಯಮ ಮತ್ತು ಸೇವಾ ಕ್ಷೇತ್ರಗಳು ಬೃಹತ್ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿವೆ. ಬಿಟ್‌ಕಾಯಿನ್‌ ಅಥವಾ ಕ್ರಿಪ್ಟೊಕರೆನ್ಸಿ ಉದಾಹರಣೆಯನ್ನೇ ತೆಗೆದುಕೊಳ್ಳಿ, ಕ್ರಿಪ್ಟೋಕರೆನ್ಸಿಯ ವಿಷಯದಲ್ಲಿ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು. ಡಿಜಿಟಲ್ ಕರೆನ್ಸಿ ತಪ್ಪು ಕೈಗಳ ವಶವಾಗಿ ನಮ್ಮ ದೇಶದ ಯವಜನತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದರು.
ಭಾರತದ ಉದ್ಯಮ ಮತ್ತು ಸೇವಾ ಕ್ಷೇತ್ರಗಳು ಸಂಪನ್ಮೂಲಗಳ ಪರಿವರ್ತನೆ ಮತ್ತು ಜೀವವೈವಿಧ್ಯದ ರಕ್ಷಣೆಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಬೃಹತ್ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿವೆ ಎಂದು ಹೇಳಿದರು.

ಕಳೆದ ವಾರ, ಪ್ರಧಾನಿ ಮೋದಿ ಅವರು ದೇಶದಲ್ಲಿ ಎದ್ದಿರುವ ಬಿಟ್‌ಕಾಯಿನ್‌ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದರು. ಭಾರತದಲ್ಲಿನ ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆ ಮತ್ತು ಅದರಿಂದ ಯುವಜನತೆ ಹಾಳಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದರು.

ಸಭೆಯಲ್ಲಿ ಅಂದು ಡಿಜಿಟಲ್ ಕರೆನ್ಸಿ ಬಗ್ಗೆ ಸಮಗ್ರವಾಗಿ ಸಮಾಲೋಚನೆ ನಡೆಸಲಾಗಿತ್ತು. ಆರ್‌ಬಿಐ, ಹಣಕಾಸು ಸಚಿವಾಲಯ, ಗೃಹ ಸಚಿವಾಲಯವು ಅದರ ಬಗ್ಗೆ ವಿಸ್ತಾರವಾದ ಪರಿಶೀಲನೆ ಮಾಡುತ್ತಿದೆ. ದೇಶ ಮತ್ತು ಪ್ರಪಂಚದಾದ್ಯಂತದ ತಜ್ಞರ ಜೊತೆ ಕೂಡ ಸಮಾಲೋಚನೆ ನಡೆಸಿದ್ದರು.

ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆಗಳು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಮಾರ್ಗಗಳಾಗಲು ಬಿಡಬಾರದು ಎಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಚರ್ಚಿಸಲಾಗಿತ್ತು.

ಚಳಿಗಾಲ ಅಧಿವೇಶನದಲ್ಲಿ ಮಸೂದೆ ಮಂಡನೆ?: ಈ ತಿಂಗಳ 29ರಿಂದ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗಲಿದ್ದು, ಅದರಲ್ಲಿ ಸರ್ಕಾರ ಕ್ರಿಪ್ಟೊಕರೆನ್ಸಿಗೆ ಸಂಬಂಧಪಟ್ಟ ಮಸೂದೆ ಮಂಡಿಸುವ ಸಾಧ್ಯತೆಯಿದೆ.