ಬೆಳ್ತಂಗಡಿ: ಸಾಂಪ್ರದಾಯಿಕ ಭತ್ತದ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮತ್ತು ಭತ್ತದ ಕೃಷಿಯ ಬಗ್ಗೆ ಪ್ರಾಮುಖ್ಯತೆ ನೀಡುವ ನೆಟ್ಟಿನಲ್ಲಿ ಕನ್ಯಾಡಿ ಶ್ರೀಮಠದ ಸ್ವಾಮೀಜಿ ಅವರ ಮಾರ್ಗದರ್ಶನ ತಾಲೂಕಿನ ಪತ್ರಕರ್ತರ ಸಹಕಾರದಲ್ಲಿ ಇಂದಿನ ಯುವಜನತೆಗೆ ಕೃಷಿಯ ಬಗ್ಗೆ ಒಲವು ಮೂಡಿಸುವ ಹಾಗೂ ಎಲ್ಲರಿಂದ ನಿರ್ಲಕ್ಷಕ್ಕೆ ಒಳಗಾಗಿರುವ ಸಾಂಪ್ರದಾಯಿಕ ಸಾವಯವ ಭತ್ತದ ಕೃಷಿಯು ಎಲ್ಲೆಡೆ ಹಿಂದಿನಂತೆ ವಿಜೃಂಭಿಸಲಿ ಎನ್ನುವ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಕ್ಕಳಿಗೆ ಶಿಕ್ಷಣದ ಜತೆಗೆ ಕೃಷಿ ಸಂಸ್ಕೃತಿಯ ಬಗೆಗೆ ನಿರಂತರ ಕಲಿಸಿಕೊಡಬೇಕು. ಕೃಷಿಯ ಕಡೆಗೆ ಗಮನ ಕೊಟ್ಟರೆ ಇಂದಿಗೂ ದುರ್ಭಿಕ್ಷವಿಲ್ಲ. ಜಾಗೃತಿಯ ವಿನಃ ಪರಿವರ್ತನೆಯಾಗದು. ಪತ್ರಿಕಾ ಮಾಧ್ಯಮದ ಪ್ರೇರಣೆಯಿಂದ ಪರಿವರ್ತನೆ ಸಾಧ್ಯ. ಬದುಕಿನಲ್ಲಿ ಆರೋಗ್ಯ, ನೆಮ್ಮದಿ ಕಾಣಬೇಕಾದರೆ ಪೂರ್ತಿ ಕೃಷಿಯ ಒಳಗೆ ಹೋಗಬೇಕು ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಕನ್ಯಾಡಿ ಶ್ರೀ ಗುರುದೇವ ಮಠದ ಗದ್ದೆಯಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೇಜಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮನಸ್ಸು ವಾಣಿಜ್ಯಕರಣ ಗೊಂಡಿರುವುದೇ ಭತ್ತದ ಬೆಳೆಯ ವಿಮುಖತೆಗೆ ಕಾರಣ. ಕೊರೋನ ಪ್ರಕೃತಿಯ ಜತೆಗೆ ಬದುಕುವ ಪಾಠ ಕಲಿಸಿದೆ, ಆತ್ಮನಿರ್ಭರ ಭಾರತದ ಯುವ ಜನಾಂಗಕ್ಕೆ ಕೃಷಿ ಪ್ರೇರಣೆಯಾಗಲಿ ಎಂದರು.
ಭತ್ತದ ಕೃಷಿ ತಜ್ಞ ಬಿ.ಕೆ.ಪರಮೇಶ್ವರ ರಾವ್ ಮತ್ತು ಕ್ರಷಿ ತಜ್ಞ ಪ್ರಭಾಕರ ಮಯ್ಯ ಭತ್ತದ ಕೃಷಿ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ದ..ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಲೋಕೇಶ್ ಪೆರ್ಲಂಪಾಡಿ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಮನೋಹರ ಬಳಂಜ ನಿರೂಪಿಸಿ, ಕೋಶಾಧಿಕಾರಿ ಚೈತ್ರೇಶ್ ಇಳಂತಿಲ ವಂದಿಸಿದರು.
ಟ್ರಸ್ಟೀ ತುಕಾರಾಮ ಸ್ವಾಗತಿಸಿದರು, ಮಠದ ಎರಡು ಎಕ್ರೆ ಗದ್ದೆಯಲ್ಲಿ ಪತ್ರಕರ್ತ ಸದಸ್ಯರು ಮತ್ತು ಮಹಿಳೆಯರು ಗದ್ದೆ ನಾಟಿ ಮಾಡಿದರು.
ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಗದ್ದೆಗೆ ಹಾಲೆರೆದು ನೀಜಿ ನಾಟಿಗೆ ಚಾಲನೆ ನೀಡಿದರು.