ಬದುಕು ಕಟ್ಟೋಣ ಬನ್ನಿ ತಂಡದಿಂದ ಬದಲಾದ ಕೊಳಂಬೆ ಈ ಮಹತ್ಕಾರ್ಯ ದೇಶದಲ್ಲೇ‌ ವಿನೂತನವಾದದ್ದು : ಚಕ್ರವರ್ತಿ ಸೂಲಿಬೆಲೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಕೊಳಂಬೆಯಲ್ಲಿ 2019ರಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಸೂರು ಕಳೆದುಕೊಂಡವರಿಗೆ ಹೊಸ ಭರವಸೆಯೊಂದಿಗೆ ನವ ಬದುಕು ಕಟ್ಟಿ ಕೊಟ್ಟ ಬದುಕು ಕಟ್ಟೋಣ ಬನ್ನಿ ತಂಡದಿಂದ ನೂತನವಾಗಿ ನಿರ್ಮಾಣಗೊಂಡ 12 ಗೃಹಗಳ ಪ್ರವೇಶೋತ್ಸವ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉದ್ಘಾಟನೆ ಗೊಳಿಸಿದರು.

ಬಳಿಕ ಮಾತನಾಡಿದ ಅವರು, ಬದುಕು ಕಟ್ಟೋಣ ಬನ್ನಿ ತಂಡ ಕೊಳಂಬೆಯಲ್ಲಿ ಮಾಡಿರುವ ಕಾರ್ಯ ದೇಶದಲ್ಲೇ‌ ವಿನೂತನವಾದದ್ದು. ಇಲ್ಲಿ‌ ಸಾವಿರಾರು ಕಾರ್ಯಕರ್ತರ ಶ್ರಮದ ಬೆವರು ಇಂದು ಪುಷ್ಪಗಳಾಗಿ ಪರಿವರ್ತಿತವಾಗಿ ಪರಿಮಳ ಸೂಸುತ್ತಿದೆ. ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಜೊತೆ ಸೇರಿ ಮಾಡಿದ ಈ ಮಹತ್ಕಾರ್ಯ ಅದ್ಭುತವಾಗಿದೆ. ಇದು ಪ್ರಧಾನಿ ಮೋದೀಜಿಯವರು ತಮ್ಮ ಮನ್ಕಿ ಬಾತ್‌ನಲ್ಲಿ ಇದನ್ನು ಉದ್ಧರಿಸುವಂತಾಗಬೇಕು. ಸ್ವಂತ ಉದ್ಯಮ ಮತ್ತು‌ ಬದುಕಿಗಿಂತ ಸಮಾಜದ ನೋವಿಗೆ ಈ‌ ರೀತಿ‌ ಸ್ಪಂದಿಸಿದಾಗ ಅದರಿಂದ ಸಿಗುವ ಆನಂದ ವರ್ಣಿಸಲು ಅಸಾಧ್ಯ. ಬದುಕು ಕಟ್ಟೋಣ ಈ‌ ತಂಡದ ಸೇವಾ ಕಾರ್ಯ‌ ಸಾಂಕ್ರಾಮಿಕದಂತೆ ನಾಡಿನುದ್ದಗಲ ಹಬ್ಬಲಿ. ಇಂತಹಾ ವಿಕೋಪಗಳು ಬಂದಾಗ ಅದನ್ನು ಮೀರಿ‌ ನಿಂತು ಮರು ನಿರ್ಮಾಣ ಮಾಡುವ ತಾಕತ್ತು ನಮ್ಮಲ್ಲಿದೆ ಎಂಬುದನ್ನು ಇಲ್ಲಿ ನಿರೂಪಿಸಲಾಗಿದೆ. ಅದಕ್ಕೆ ಪೂರಕವಾಗಿ ಕೆಲಸ ಮಾಡುವ ಹರೀಶ್ ಪೂಂಜರಂತಹಾ ಶಾಸಕರು ಇದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಇಂತಹಾ ಶಾಸಕರು ಎಲ್ಲಾಕಡೆ ಇದ್ದಾಗ ಮೋದೀಜಿಯವರ ಭವ್ಯ ಭಾರತದ ಪರಿಕಲ್ಪನೆ ಈಡೇರುವುದರಲ್ಲಿ‌ ಸಂದೇಹವಿಲ್ಲ ಎಂದರು.

READ ALSO

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜಾ ವಹಿಸಿದ್ದರು. ಆರ್‌ಎಸ್‌ಎಸ್ ನಮಗೆ ನೀಡಿದ‌ ಚಿಂತನೆಯಂತೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಅವರು ಜೋಡೆತ್ತುಗಳಾಗಿ ಇಲ್ಲಿ ಇಡೀ ದೇಶ- ಜಗತ್ತಿಗೆ ಪ್ರೇರಣೆಯಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಗೋವು ಮತ್ತು ಕೃಷಿಯನ್ನು ಆಧರಿಸಿ ನಮ್ಮ ಬದುಕು ಮುನ್ನಡೆಯುವ ಚಿಂತನೆ ಎಲ್ಲರ ಮನದಲ್ಲಿ ಮೂಡಿದರೆ ಮಾತ್ರ ಪರಿವರ್ತನೆ ಸಾಧ್ಯ. ಅದಕ್ಕೆ ಪ್ರೇರಣೆ ನೀಡಲು ಸೂಲಿಬೆಲೆ ಅವರನ್ನು ಇಲ್ಲಿ ಕರೆಸಿದ್ದೇವೆ. ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನೆರೆಯೂ ಒಂದು ಕಾರಣವಾಗಿದೆ. ಅಂದು ಒಬ್ಬಂಟಿಯಾಗಿ ರಾಜ್ಯ‌ ತಿರುಗಾಡಿದ ಮುಖ್ಯಮಂತ್ರಿ‌ ಯಡಿಯೂರಪ್ಪ ಅವರು ಕುಕ್ಕಾವಿಗೆ ಬಂದಿದ್ದಾಗ ಇಡೀ ರಾಜ್ಯಕ್ಕೇ ಅನ್ವಯವಾಗುವಂತೆ, ನೆರೆಯಲ್ಲಿ‌‌‌ ಮನೆಗಳನ್ನು ಕಳೆದುಕೊಂಡಿರುವವರಿಗೆ 5 ಲಕ್ಷ ರೂ. ಪರಿಹಾರ ಕೊಡುವುದಾಗಿ ಘೋಷಿಸಿದ್ದರು. ಆ ಮೊತ್ತ ಇಲ್ಲಿನ ಫಲಾನುಭವಿಗಳಿಗೂ ಬಂದಿದೆ‌. ನೆರೆಯ ಕಾರಣಕ್ಕಾಗಿ ನಮ್ಮ ತಾಲೂಕಿಗೆ 500 ರಿಂದ 600 ಕೋಟಿ ರೂ. ಹೆಚ್ಚುವರಿಯಾಗಿ ಅನುದಾನ ಒದಗಿಸಿಕೊಟ್ಟಿದ್ದಾರೆ. ದಾನಿಗಳ ತಂಡ ಕಟ್ಟಿ “ಕಾಳಜಿ‌ ರಿಲೀಫ್ ಫಂಡ್” ಕೊಟ್ಟ ಏಕೈಕ ತಾಲೂಕು ಬೆಳ್ತಂಗಡಿ ಕೊಳಂಬೆಯ ಮಂದಿ ತಮ್ಮ‌ಮನೆಗಳಲ್ಲಿ‌ ಪ್ರತಿದಿನ ದೇವರಿಗೆ ದೀಪ‌ ಇಡುವಾದ ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಸಹೋದರರಿಗೆ ಭಗವಂತನು ಒಳಿತು ಮಾಡಲಿ ಎಂದು ಪ್ರಾರ್ಥಿಸಬೇಕು. ಆಗ ಅವರಿಗೆ ಇನ್ನಷ್ಟು ಸೇವಾ ಮನೋಶಕ್ತಿ ಬಂದು ಆ ಮೂಲಕ ತಾಲೂಕಿನ ‌ಜನತೆಗೆ ಸೇವೆ ನೀಡಲು ಶಕ್ತಿ‌ ದೊರೆಯುತ್ತದೆ ಎಂದರು. ಈ‌ ಇಬ್ಬರೂ ಸಹೋದರರು ಮಾಡಿದ ಸೇವೆಗಾಗಿ ಇಡೀ ತಾಲೂಕಿನ ಜನತೆಯ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.

ಅತಿಥಿಗಳಾಗಿದ್ದ ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಶುಭಕೋರಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್‌ಸಿಂಹ ನಾಯಕ್‌, ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಶಶಿ ಕೆಟರಿಂಗ್ ಸರ್ವಿಸಸ್ ಪ್ರೈ. ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಶಶಿಧರ ಶೆಟ್ಟಿ ಗುರುವಾಯನಕೆರೆ, ಚಾರ್ಮಾಡಿ ಗ್ರಾ.ಪ‌ಂ ಅಧ್ಯಕ್ಷ ಕೆ.ವಿ ಪ್ರಸಾದ್, ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ರಂಜಿನಿ ಮತ್ತು ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ ಭಾಗಿಯಾಗಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್, ಸೇವೆಗಾಗಿ ಇಲ್ಲಿ‌ಕೆಲಸ ಆರಂಭಿಸಿದಾಗ ನಮಗೆ ಅನೇಕ ಟೀಕೆಗಳು ಎದುರಾದವು. ಆದರೆ ಅದೆಲ್ಲವನ್ನೂ ಮೆಟ್ಟಿ ನಿಂತು ಇಲ್ಲಿನ ಕುಟುಂಬಗಳ ಬದುಕು ಕಟ್ಟುವಲ್ಲಿ ನಮ್ಮದೇ ಆದ ಸೇವೆ ನೀಡಿದ್ದೇವೆ. ಇದಕ್ಕಾಗಿ ನಮ್ಮ ಜೊತೆ ಕೈ ಜೋಡಿಸಿದ ಶಾಸಕರು, ಸಂಘ ಸಂಸ್ಥೆಯವರು ಹಾಗೂ ದಾನಿಗಳು, ಜೊತೆಗೆ ಸಾವಿರಾರು ಸ್ವಯಂಸೇವಕರು ಅಭಿನಂದನಾರ್ಹರು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಿದ್ದ ಡಿಜಿಟಲ್ ಪರದೆಯಲ್ಲಿ ಕೊಳಂಬೆಯ ಅಂದಿನ‌ ನೆರೆ ಮತ್ತು ಆ ಬಳಿಕದ ಕ್ರಾಂತಿ‌ವರೆಗಿನ ಚಿತ್ರಗಳ ಚಿತ್ರೀಕರಣವನ್ನು ಪ್ರದರ್ಶಿಸಲಾಯಿತು.‌