ರಸ್ತೆ ಉದ್ಘಾಟನೆಯಲ್ಲಿ ಒಡೆಯದ ತೆಂಗಿನ ಕಾಯಿ! ಬಿರುಕು ಬಿಟ್ಟ ಹೊಚ್ಚ ಹೊಸ ರಸ್ತೆ!

ಬಿಜನೂರು (ಉತ್ತರ ಪ್ರದೇಶ): ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ, ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಆ ಹಣದಲ್ಲಿ ಕಾಮಗಾರಿಯ ಉಸ್ತುವಾರಿ ವಹಿಸಿಕೊಳ್ಳುವವರು ಅದೆಷ್ಟು ಹಣವನ್ನು ಗುಳುಂ ಮಾಡುತ್ತಾರೆ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ.

ಇಂಥದ್ದೇ ಒಂದು ಘಟನೆ ಉತ್ತರಪ್ರದೇಶದ ಬಿನೂರಿನಲ್ಲಿ ನಡೆದಿದೆ. ಹೊಸತು ರಸ್ತೆಯ ಉದ್ಘಾಟನೆಯ ವೇಳೆ ನಡೆದ ಅವಘಡದಿಂದಾಗಿ ರಸ್ತೆ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡ ಗುತ್ತಿಗೆದಾರ, ಇಂಜಿನಿಯರ್‌ ಸೇರಿದಂತೆ ಇತರರಿಗೆ ಗ್ರಹಚಾರ ತಂದಿಕ್ಕಿದೆ.

READ ALSO

ಆಗಿದ್ದೇನೆಂದರೆ, ಸುಮಾರು 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದೊಂದು ರಸ್ತೆಯನ್ನು ಬಿಜನೂರಿನಲ್ಲಿ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಅದರ ಉದ್ಘಾಟನೆಗೆಂದು ಸ್ಥಳೀಯ ಬಿಜೆಪಿ ಶಾಸಕಿ ಸುಚಿ ಮೌಸಂ ಚೌಧರಿ ಅವರನ್ನು ಆಹ್ವಾನಿಸಲಾಗಿತ್ತು. ಸಂಪ್ರದಾಯದಂತೆ ಅವರು ಉದ್ಘಾಟನೆ ಸಂದರ್ಭದಲ್ಲಿ ತೆಂಗಿನಕಾಯಿ ಒಡೆಯಲು ಅದನ್ನು ರಸ್ತೆಗೆ ಕುಟ್ಟಿದ್ದಾರೆ.

ಆದರೆ ಆಗಿದ್ದೇನೆಂದರೆ ತೆಂಗಿನಕಾಯಿ ಒಡೆಯಲಿಲ್ಲ, ಬದಲಿಗೆ ಈ ಹೊಚ್ಚ ಹೊಸತು ರಸ್ತೆ ಬಿರುಕು ಬಿಟ್ಟಿತು! ಅಲ್ಲಿದ್ದವೆಲ್ಲಾ ಕಣ್‌ಕಣ್‌ ಬಿಡುತ್ತಿದ್ದಂತೆಯೇ ಶಾಸಕಿ ಮುಜುಗರಕ್ಕೆ ಒಳಗಾಗಿ ಕಳಪೆ ಕಾಮಗಾರಿಯಿಂದ ಗರಂ ಆದರು. ಕೂಡಲೇ ರಸ್ತೆಯ ಕಳಪೆ ಕಾಮಗಾರಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿಯೇ ಬಿಟ್ಟರು.

ಉದ್ಘಾಟನೆಗೆ ಬಂದಿದ್ದ ಅವರು ಸುಮಾರು ಮೂರು ಗಂಟೆ ಅಲ್ಲಿಯೇ ಇದ್ದು, ಕಳಪೆ ಮಟ್ಟದ ಕಾಮಗಾರಿ ತನಿಖೆಗಾಗಿ ರಸ್ತೆ ಮಾದರಿ ಸಂಗ್ರಹಿಸಲು ಅಧಿಕಾರಿಗಳನ್ನು ಕರೆಸಿಕೊಂಡರು. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡವರಿಗೆ ಗ್ರಹಚಾರ ಒಕ್ಕರಿಸಿದೆ.