ವಾತ್ಸಲ್ಯ ಕುಟುಂಬಕ್ಕೆ ಸೂರು ಒದಗಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ದೇವದುರ್ಗ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಡಾ. ಹೇಮಾವತಿ ವಿ ಹೆಗ್ಗಡೆಯವರ ಸೇವಾಮನೋಭಾವನೆಯ ಚಿಂತನೆಯಡಿಯಲ್ಲಿ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಸೂರು ನಿರ್ಮಾಣ ಮಾಡಿ ಹಸ್ತಾಂತರಿಸುವ ಮಹತ್ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಂಪೂರ್ಣ ವೆಚ್ಚವನ್ನು ಭರಿಸಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಎರಡು ಅರ್ಹ ವಾತ್ಸಲ್ಯ ಕುಟುಂಬಗಳಿಗೆ ಮನೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪಳ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಗಣೇಶ್.ಬಿ ಯವರು ಕಸ್ತೂರಮ್ಮ ಹಾಗೂ ಮಲ್ಲಮ್ಮ ಭೀಮಣ್ಣ ದಂಪತಿಗಳಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದರು.

READ ALSO

ನಿರ್ಗತಿಕ ಕುಟುಂಬಗಳು ಸಮಾಜದಲ್ಲಿ ಎಲ್ಲರಂತೆ ನೆಮ್ಮದಿಯ ಜೀವನ ನಡೆಸಿ ಬಾಳಿಬದುಕಲು ವಾತ್ಸಲ್ಯ ಯೋಜನೆ ಸಹಕಾರಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ 4ದಶಕಗಳಿಂದ ರಾಜ್ಯಾದ್ಯಂತ ತನ್ನ ಸೇವಾ ಚಟುವಟಿಕೆಗಳನ್ನು ಮುನ್ನಡೆಸುತ್ತಾ ಬರುತ್ತಿದ್ದು ರಾಜ್ಯದಲ್ಲಿ 12ಸಾವಿರಕ್ಕೂ ಹೆಚ್ಚಿನ ಅತ್ಯಂತ ಕಡುಬಡವ ವೃದ್ಧ ಕುಟುಂಬಗಳಿಗೆ ತನ್ನ ಜೀವನ ನಿರ್ವಹಣೆಯ ಅಗತ್ಯತೆಗಳನ್ನು ಪೂರೈಸಲು ನೆರವಾಗುವ ನಿಟ್ಟಿನಲ್ಲಿ ಮಾಸಿಕ ಸಹಾಯಧನ ನೀಡುತ್ತಿದ್ದು ನಿರ್ಗತಿಕ ಕುಟುಂಬಗಳ ಸದಸ್ಯರು ತನ್ನ ಹಸಿವನ್ನು ನೀಗಿಸಲು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ನೆರವಾಗುತ್ತಿದೆ. ಇಂತಹ ಅರ್ಹ ಕುಟುಂಬಗಳನ್ನು ಗುರುತಿಸಿ ಪಾತ್ರೆಪರಿಕರಗಳು, ವಸ್ತ್ರ ಹಾಗೂ ಅಗತ್ಯ ವಸ್ತುಗಳ ಕಿಟ್ ಗಳನ್ನು ಒದಗಿಸಿ ಇದೀಗ ವಾಸಿಸಲು ಯೋಗ್ಯವಲ್ಲದ ಮನೆಯಲ್ಲಿರುವ ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡುವ ಕಾರ್ಯಕ್ಕೆ ನಮ್ಮ ಸಂಸ್ಥೆ ಮುಂದಾಗಿದೆ. ಇಂದಿನ ಈ ಆಧುನಿಕ ಯುಗದಲ್ಲಿಯೂ ಇಂತಹ ಹಲವು ಕುಟುಂಬಗಳಿದ್ದು ಇವರಿಗೆ ಆಸರೆಯನ್ನೊದಗಿಸುವ ಡಾ. ಹೇಮಾವತಿ ವಿ ಹೆಗ್ಗಡೆಯವರ ಕನಸು ಇದೀಗ ನನಸಾಗಿದೆ. ವಾತ್ಸಲ್ಯ ಮನೆಯೊಂದಿಗೆ ಮೂಲಭೂತ ಸೌಕರ್ಯ ಗಳಾದ ಸ್ನಾನ ಗೃಹ ಮತ್ತು ಶೌಚಾಲಯವನ್ನು ನಿರ್ಮಾಣ ಮಾಡಿ ಇಂದು ಹಸ್ತಾಂತರ ಮಾಡಿದ್ದೇವೆ ಈ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಒಳಿತಾಗಲಿ ಎಂದು ಶುಭಹಾರೈಸಿದರು.

ವಾತ್ಸಲ್ಯ ಫಲಾನುಭವಿ ಕಸ್ತೂರಮ್ಮರವರು ವಾಸವಿದ್ದ ಗುಡಿಸಲು ಹಾಗೂ ನೂತನವಾಗಿ ನಿರ್ಮಿಸಿರುವ ಮನೆ
ವಾತ್ಸಲ್ಯ ಫಲಾನುಭವಿ ಮಲ್ಲಮ್ಮ ಭೀಮಣ್ಣರು ಈ ಹಿಂದೆ ವಾಸವಾಗಿದ್ದ ಗುಡಿಸಲು ಹಾಗೂ ನೂತನವಾಗಿ ನಿರ್ಮಿಸಿರುವ ಮನೆ

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ನಿರ್ದೇಶಕರಾದ ಸಂತೋಷ್ ಕುಮಾರ್, ದೇವದುರ್ಗ ತಾಲೂಕಿನ ಯೋಜನಾಧಿಕಾರಿ ರಾಜೇಶ್.ಎಂ ಕಾನರ್ಪ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸತೀಶ್ ಬಳೆ, ವಾಣಿಶ್ರೀ ಯುವಬ್ರಿಗೇಡ್ ಗಬ್ಬೂರು ಇದರ ಸದಸ್ಯರು, ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಕಾರ್ಯಕರ್ತರು, ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿ ಯವರು ಹಾಗೂ ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.