ಬೆಳ್ತಂಗಡಿ: ಅಖಂಡ ತುಳುನಾಡಿನ ಭಾಗವಾದ ಕಾಸರಗೋಡಿನಲ್ಲಿ ತುಳು ಭಾಷಿಕರೇ ಬಹುಸಂಖ್ಯಾತರಾಗಿದ್ದು ಕೇರಳ ಸರಕಾರವು ತುಳು ಭಾಷೆಯ ಶಿಕ್ಷಣಕ್ಕೆ ಯಾವುದೇ ರೀತಿಯ ಪ್ರೋತ್ಸಾಹ ಅವಕಾಶ ನೀಡಿಲ್ಲ ಕಾಸರಗೋಡಿನ ಸಂಸದರು, ಶಾಸಕರು, ಜನಪ್ರತಿನಿಧಿಗಳು ನಿರಂತರವಾಗಿ ತುಳು ಭಾಷೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಇದೀಗ ಕೇರಳ ಸರಕಾರವು ಕಾಸರಗೋಡು ಜಿಲ್ಲೆಯಲ್ಲಿ ಮಲಯಾಳಂ ಭಾಷೆಯನ್ನು ಶಿಕ್ಷಣದಲ್ಲಿ ಕಡ್ಡಾಯಗೊಳಿಸಿದ್ದು ಇದು ತುಳುವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್. ಜೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೇರಳ ಮತ್ತು ಕರ್ನಾಟಕ ಸರಕಾರಗಳು ನಿರಂತರವಾಗಿ ತುಳು ಭಾಷೆ ಮತ್ತು ತುಳುನಾಡನ್ನು ನಿರ್ಲಕ್ಷಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಅಖಂಡ ತುಳುನಾಡ್ ರಾಜ್ಯ ರಚನೆಗೆ ತೀವ್ರಗತಿಯ ಹೋರಾಟ ನಡೆಯುವುದೊಂದೇ ಅಂತಿಮ ಆಯ್ಕೆಯಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.