
ತ್ರಿಶೂರ್: ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಕೆ.ಆರ್.ಸಚ್ಚಿದಾನಂದ್ ಅಲಿಯಾಸ್ ಸಚ್ಚಿ(48ವ) ಜೂನ್ 18ರಂದು ನಿಧನರಾಗಿದ್ದಾರೆ.

ಅಯ್ಯಪ್ಪನುಂ-ಕೋಶಿಯುಂ ಎಂಬ ಸೂಪರ್ ಹಿಟ್ ಚಿತ್ರವಲ್ಲದೆ ಅನಾರ್ಕಲಿ ಎಂಬ ಪ್ರೇಮ ಕಥೆಯನ್ನು ನಿರ್ದೇಶಿಸಿದ್ದರು. ಸಮಾಜಕ್ಕೆ ಸಂದೇಶ ಸಾರುವ ಡ್ರೈವಿಂಗ್ ಲೈಸನ್ಸ್ ಕೂಡಾ ಸಚ್ಚಿಯ ಕೈಚಳಕ ಹೊಂದಿತ್ತು.
ವಕೀಲ, ಕವಿ, ರಂಗಭೂಮಿ ಕಲಾವಿದ, ಕಥೆಗಾರ, ಸಂಭಾಷಣೆಗಾರ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಸಚ್ಚಿ ಬಹುಮುಖ ಪ್ರತಿಭೆಯಾಗಿದ್ದರು. ಕೇರಳ ಹೈಕೋರ್ಟಿನಲ್ಲಿ 8 ವರ್ಷಗಳ ಕಾಲ ಕ್ರಿಮಿನಲ್ ಲಾಯರ್ ಆಗಿದ್ದರು.
ಕಳೆದ ಎರಡು ದಿನಗಳ ಹಿಂದೆ ಸೊಂಟದ ಭಾಗದಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚ್ಚಿ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ, ಮತ್ತೊಮ್ಮೆ ತೀವ್ರ ಹೃದಯ ಸ್ತಂಬನವಾಗಿ ಮೃತಪಟ್ಟಿದ್ದಾರೆ ಎಂದು ತ್ರಿಶೂರ್ ಆಸ್ಪತ್ರೆ ಮೂಲಗಳು ತಿಳಿಸಿವೆ.
ತ್ರಿಶೂರಿನ ಜ್ಯುಬಿಲಿ ಮಿಷನ್ ಆಸ್ಪತ್ರೆಯಲ್ಲಿ ನಿಧನರಾದ ಸಚ್ಚಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.