ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಸುವರ್ಣ ಮಹೋತ್ಸವ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅದ್ದೂರಿಯಾಗಿ ನಡೆಯಿತು. 6:50ರ ಗೋಧೂಳಿ ಲಗ್ನದಲ್ಲಿ 183 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು.
ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು, ಕಂದಾಯ ಸಚಿವ ಆರ್ ಅಶೋಕ್, ಚಲನಚಿತ್ರ ನಟ ಗಣೇಶ್ ಮತ್ತು ಗಣ್ಯರು ಮಂಗಳಸೂತ್ರ ನೀಡಿ ಶುಭ ಹಾರೈಸಿದರು.

ಬೆಳಗ್ಗೆ ಹೆಗ್ಗಡೆಯವರ ನಿವಾಸದಲ್ಲಿ ವಧುವಿಗೆ ಸೀರೆ ಮತ್ತು ರವಿಕೆ ಹಾಗೂ ವರನಿಗೆ ದೋತಿ ಶಾಲು ವಿತರಿಸಿದರು. ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನದಲ್ಲಿ ಮದುವೆ ಮಂಟಪಕ್ಕೆ ಪ್ರವೇಶಿಸಿದರು. ಅಲ್ಲಿ ಹೆಗ್ಗಡೆಯವರು ಮತ್ತು ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿ ಶುಭಹಾರೈಸಿದರು. 6.50ರ ಗೋಧೂಳಿ ಲಗ್ನದಲ್ಲಿ ವೇದಘೋಷ ಮಂತ್ರ ಪಠಣದೊಂದಿಗೆ, ಮಂಗಳವಾದ್ಯಗಳೊಂದಿಗೆ ಜಾತಿವಾರು ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿ ಮಂತ್ರಾಕ್ಷತೆ, ಹಾರ ವಿನಿಮಯ ಹಾಗೂ ಮಾಂಗಲ್ಯಧಾರಣೆ ಯೊಂದಿಗೆ ವಿವಾಹ ನೆರವೇರಿಸಲಾಯಿತು.

READ ALSO

ನೂತನ ದಂಪತಿಗಳಿಂದ ಪ್ರತಿಜ್ಞಾವಿಧಿ: ಮಂಗಳ ಮುಹೂರ್ತದಲ್ಲಿ ವಧುವರರಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ, ಕಾಮದಲ್ಲಿ ಸಹಚರರಾಗಿ ಪ್ರೀತಿ ವಿಶ್ವಾಸದಿಂದ ಪರಸ್ಪರ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವುದೇ ದುರಭ್ಯಾಸಗಳಿಗೆ ತುತ್ತಾಗದೆ ಬದುಕುತ್ತೇವೆ ಎಂದು ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಾನದಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣವಚನ ಬದ್ಧರಾಗಿದ್ದೇವೆ ಎಂದು ಇದೇ ವೇಳೆ ನೂತನ ಜೋಡಿಗಳು ಪ್ರತಿಜ್ಞೆ ಮಾಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್ ಬದುಕಿನಲ್ಲಿ ಆಸ್ತಿ ಅಂತಸ್ತು ಮುಖ್ಯ ಅಲ್ಲ ಪ್ರೀತಿ ವಿಶ್ವಾಸವೇ ಮುಖ್ಯ, ಬಡತನ ಸಿರಿತನ ಶಾಶ್ವತವಲ್ಲ, ಪ್ರೀತಿ ವಿಶ್ವಾಸ ವಿಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ ಎಂದರು. ಗಂಡ-ಹೆಂಡತಿ ಪರಸ್ಪರ ಅರ್ಥೈಸಿಕೊಂಡು ಪ್ರೀತಿ-ವಿಶ್ವಾಸದಿಂದ ಸಾರ್ಥಕವಾಗಿ ಜೀವನವನ್ನು ನಡೆಸಬೇಕು ಎಂದು ಶುಭ ಹಾರೈಸಿದರು.

ಮನೆಬಾಗಿಲಿಗೆ ಸರ್ಕಾರದ ಸೇವೆ: 24 ಗಂಟೆಗಳೊಳಗೆ ಮನೆಬಾಗಿಲಿಗೆ ಸರ್ಕಾರದಿಂದ ದೂರವಾಣಿ ಮೂಲಕ ವೃದ್ಧಾಪ್ಯ ವೇತನ ನೀಡುವ ಕಾರ್ಯಕ್ರಮ ಸದ್ಯದಲ್ಲಿಯೇ ಜಾರಿಯಾಗಲಿದೆ ಎಂದು ಸಚಿವರು ಪ್ರಕಟಿಸಿದರು. ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಲ್ಲರೂ ಸತ್ಯ ಧರ್ಮದ ಹಾದಿಯಲ್ಲಿ ನಡೆದು ಸುಖ ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.

ಚಲನಚಿತ್ರ ನಟ ಗಣೇಶ್ ವರನಟ ಡಾಕ್ಟರ್ ರಾಜಕುಮಾರ್ ರವರು ಹಾಡಿದ ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಹಾಡನ್ನು ಸುಶ್ರಾವ್ಯವಾಗಿ ಹಾಡಿ ನೂತನ ದಂಪತಿಗಳಿಗೆ ಶುಭಹಾರೈಸಿದರು.

ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ ಸಾಮೂಹಿಕ ವಿವಾಹ ಸರಳ ಜೀವನಕ್ಕೆ ನಾಂದಿಯಾಗಬೇಕು ಮದುವೆಯ ಹೆಸರಿನಲ್ಲಿ ದುಂದುವೆಚ್ಚ ಮಾಡಬಾರದು. ವಿವಾಹಕ್ಕಾಗಿ ಮಾಡುವ ದುಂದುವೆಚ್ಚ, ವರದಕ್ಷಿಣೆ, ಜೀತ ಪದ್ಧತಿ ಮೊದಲಾದ ಸಮಸ್ಯೆಗಳನ್ನು ನಿವಾರಿಸಲಿಕ್ಕಾಗಿ ಸಾಮೂಹಿಕ ವಿವಾಹ ಯೋಜನೆಯನ್ನು ಧರ್ಮಸ್ಥಳದಲ್ಲಿ ಆರಂಭಿಸಲಾಗಿದ್ದು ಇಂದು ಜಾತಿ-ಮತ ಮರೆತು 60 ಜೊತೆ ಅಂತರ್ಜಾತೀಯ ವಿವಾಹವಾದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇವರಿಗೆ ವಿವಾಹ ನೋಂದಣಿ ಪ್ರಮಾಣಪತ್ರ ನೀಡಿ ಅದು ಮುಂದೆ ಉದ್ಯೋಗ ಶಿಕ್ಷಣ ಹಾಗೂ ಸರಕಾರದ ನೆರವು ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ಕೃಷ್ಣಪ್ಪ ಹರೀಶ್ ಪೂಂಜಾ ಡಾ|| ಹೇಮಾವತಿ ಹೆಗಡೆ, ಸುರೇಂದ್ರಕುಮಾರ್ ಡಿ, ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.