ಕಡಲತಡಿ ಮಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ 38 ಶ್ರೀಲಂಕಾ ಪ್ರಜೆಗಳ ಬಂಧನ!

ಮಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸವಿದ್ದ 38 ಮಂದಿ ಶ್ರೀಲಂಕಾದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಶ್ರೀಲಂಕಾದಿಂದ ತಮಿಳುನಾಡಿನ ತೂತುಕುಡಿಗೆ ಬಂದ ಇವರೆಲ್ಲಾ ಅಲ್ಲಿಂದ ಕೆನಡಾಗೆ ಹೋಗುವವರಿದ್ದರು. ಆದರೆ ತಮಿಳುನಾಡು ಚುನಾವಣೆ ಹಿನ್ನೆಲೆ ಅವರನ್ನ ಮಂಗಳೂರಿಗೆ ತಂದು ಬಿಡಲಾಗಿತ್ತು.ಅಲ್ಲಿ ಚುನಾವಣೆ ಹಿನ್ನೆಲೆ ತಪಾಸಣೆ ಕಾರ್ಯ ಚುರುಕಾಗಿದ್ದ ಹಿನ್ನೆಲೆ ಮಂಗಳೂರಿಗೆ ಎಂಟ್ರಿ ಕೊಟ್ಟಿದ್ದರು. ಮಂಗಳೂರಿಗೆ ಬಂದು ಇಲ್ಲಿನ ಲಾಡ್ಜ್ ಗಳಲ್ಲಿ ತಿಂಗಳಿನಿಂದ ವಾಸ್ತವ್ಯ ಹೂಡಿದ್ದರು. ಸದ್ಯ 38 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದವರ ಹುಡುಕಾಟ ಮುಂದುವರೆದಿದೆ

READ ALSO

ಇನ್ನು ಮಂಗಳೂರಿನಲ್ಲಿ ಇವರಿಗೆ ಆಶ್ರಯ ಕೊಡಲು ನೆರವು ನೀಡಿದವರ ಬಗ್ಗೆಯೂ ತನಿಖೆ ಆರಂಭವಾಗಿದೆ. ಬೇರೆ ದೇಶದ ವ್ಯಕ್ತಿಗಳು ಮಂಗಳೂರಿಗೆ ಆಗಮಿಸಿ ಅಕ್ರಮ ಆಶ್ರಯ ಪಡೆದಿರುವ ಬಗ್ಗೆ ತನಿಖೆ ಮುಂದುವರೆದಿದೆ. ಇವರಿಗೆ ಆಶ್ರಯ ಕೊಟ್ಟ ಕಾರಣ ಮತ್ತು ನೆರವು ನೀಡಿದ ಕಾರಣ ಇಲ್ಲಿನ ಆರು ಜನರನ್ನ ವಶಕ್ಕೆ ಪಡೆಯಲಾಗಿದೆ. ಅವರಲ್ಲಿ ಕೆಲವರು ಇಂಗ್ಲೀಷ್ ಮಾತನಾಡ್ತಿದಾರೆ, ಬಹುತೇಕ ತಮಿಳು ‌ಮಾತನಾಡುವವರಿದ್ದಾರೆ. ಶ್ರೀಲಂಕಾದಿಂದ ಮಾರ್ಚ್ 17ಕ್ಕೆ ಹೊರಟು ಇವರು ತಮಿಳುನಾಡಿಗೆ ಬಂದಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಶ್ರೀಲಂಕಾದ ಉತ್ತರ ಭಾಗದವರು ಎನ್ನಲಾಗಿದೆ.

ಮಂಗಳೂರಿನ ಎರಡು ಲಾಡ್ಜ್ ಮತ್ತು ಎರಡು ಮನೆಗಳಲ್ಲಿ ಇವರು ವಾಸ್ತವ್ತ ಹೂಡಿದ್ದರು. ಇನ್ನು ಕೆನಡಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ ಏಜೆಂಟರೊಬ್ಬರು ಅವರನ್ನು ಭಾರತಕ್ಕೆ ಕರೆ ತಂದರು ಮತ್ತು ಅವರಿಂದ 5 ಲಕ್ಷ ರೂ.ಗಳಿಂದ 10 ಲಕ್ಷ ರೂ. ಪಡೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ತಮಿಳುನಾಡು ಗುಪ್ತಚರ ಬ್ಯೂರೋದಿಂದ ಸುಳಿವು ಪಡೆದು, ಪೊಲೀಸ್ ಆಯುಕ್ತ ಶಶಿ ಕುಮಾರ್ ಮತ್ತು ಪೊಲೀಸ್ ಉಪ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಹರಿರಾಮ್ ಶಂಕರ್ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.