ಬೆಂಗಳೂರು: ರಾತ್ರಿ ವೇಳೆ ಯಲ್ಲಿ ಪಟಾಕಿ ಸಿಡಿಸಿ ಜನಸಾಮಾನ್ಯರ ನೆಮ್ಮದಿ ಭಂಗ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮಾಜಿ ಶಿಕ್ಷಣ ಸಚಿವರಾದ ಎಸ್.
ಸುರೇಶ್ ಕುಮಾರ್ ರವರು ಪೋಲೀಸ್ ಇಲಾಖೆಗೆ ಪತ್ರದ ಮೂಲಕ ಸೂಚಿಸಿದ್ದಾರೆ.

ಪ್ರತಿ ದಿನ ರಾತ್ರಿ 10-00 ಗಂಟೆಯ ನಂತರ ನಗರದಲ್ಲಿ ವಿವಿಧ ಕಾರಣಗಳಿಗಾಗಿ ಪಟಾಕಿ ಸಿಡಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಐಪಿಎಲ್ ಪಂದ್ಯಗಳ ಫಲಿತಾಂಶಗಳೂ ಕಾರಣವಿರಬಹುದು.
ಕೆಲವು ಬಾರಿ ಮಧ್ಯರಾತ್ರಿಯ ಸಮಯದಲ್ಲಿ “ಹುಟ್ಟಿದ ಹಬ್ಬ” ಆಚರಿಸುವ ನೆಪದಲ್ಲಿ ಪಟಾಕಿ ಸಿಡಿಸುತ್ತಿರುವ ಮಾಹಿತಿಯೂ ತಿಳಿದು ಬಂದಿದೆ. ಇದಕ್ಕೆ ಯಾವುದೇ ರೀತಿಯಲ್ಲಿ ಆಸ್ಪದ ಕೊಡಬಾರದು ಎಂದು ತಮ್ಮಲ್ಲಿ ಕೋರುತ್ತೇನೆ.
ಈ ರೀತಿ ಪಟಾಕಿ ಹೊಡೆಯುವುದರಿಂದ ಎಳೆ ಮಕ್ಕಳಿಗೆ, ವಯೋ ವೃದ್ಧರಿಗೆ, ವಿವಿಧ ರೀತಿಯ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ರಾತ್ರಿಯ ಹೊತ್ತಿನಲ್ಲಿ ತೀವ್ರ ತೊಂದರೆಯುಂಟಾಗುತ್ತದೆ. ಅಲ್ಲದೆ ಪಶು ಪಕ್ಷಿಗಳಿಗೂ ಸಹ ಈ ಕರ್ಕಶ ಶಬ್ದವು ಆಘಾತ ಉಂಟು ಮಾಡಿ ಅವುಗಳ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಘಟನೆಗಳಿಗೆ ಆಸ್ಪದ ನೀಡದಂತೆ ಹಾಗೂ ಈ ರೀತಿಯ ಘಟನೆಗಳು ಪತ್ತೆಯಾದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ತಮ್ಮ ವಲಯದ ಎಲ್ಲಾ ಹೊಯ್ಸಳ ಸಿಬ್ಬಂದಿ ಮತ್ತು ಬೀಟ್ ಕರ್ತವ್ಯದಲ್ಲಿ ತೊಡಗಿರುವ ಸಿಬ್ಬಂದಿ ವರ್ಗದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಕೋರಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.