ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದಡಿಯಲ್ಲಿ ಯಾಂತ್ರಿಕೃತ ಕೃಷಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸೋಮವಾರ ಚಾಲನೆ ನೀಡಿದರು.
ಧರ್ಮಸ್ಥಳದ ಸಹ್ಯಾದ್ರಿ ವಸತಿ ಗೃಹದ ಬಳಿ ಹತ್ತು ಎಕರೆ ಪ್ರದೇಶದ ಗದ್ದೆಯಲ್ಲಿ ಯಾಂತ್ರಿಕೃತ ಕೃಷಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಅವರು, ಕೂಲಿ ಕಾರ್ಮಿಕರ ಕೊರತೆ ಹಾಗೂ ಅಧಿಕ ವೆಚ್ಚದಿಂದಾಗಿ ರೈತರು ಇಂದು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಯಾಂತ್ರೀಕೃತ ಕೃಷಿಯಿಂದ ಅಧಿಕ ಇಳುವರಿ ಹಾಗೂ ಲಾಭ ಪಡೆಯಬಹುದು ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಹೊಸ ಕಲ್ಪನೆ ಯೊಂದಿಗೆ ‘ಯಂತ್ರಶ್ರೀ’ ಎಂಬ ಹೆಸರನ್ನಿಟ್ಟಿದ್ದು ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಭತ್ತ ಬೇಸಾಯವನ್ನು ಯಾಂತ್ರೀಕರಣ ಗೊಳಿಸುವಂತದ್ದು ಮತ್ತು ಕೂಲಿಯಾಳುಗಳ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನವನ್ನು ಮಾಡುತಿದ್ದೇವೆ ಈ ವರ್ಷ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರೀಕೃತ ಬೇಸಾಯ ಮಾಡಲು ಉದ್ದೇಶಿಲಾಗಿತ್ತು. ಆದರೆ, ಕೊರೋನಾದಿಂದಾಗಿ ಯಂತ್ರಗಳು ನಮಗೆ ಲಭ್ಯವಾಗದಿರುವುದು ಹಾಗೂ ನಮ್ಮ ಕಾರ್ಯಕರ್ತರು ರೈತರನ್ನು ಸರಿಯಾಗಿ ಸಂಪರ್ಕಿಸಲು ಸಾಧ್ಯವಾಗದೇ ಇರುವುದರಿಂದ 15 ಸಾವಿರ ಹೆಕ್ಟೇರ್ ರಾಜ್ಯದ ವಿವಿಧೆಡೆ ಯಾಂತ್ರಿಕೃತ ಭತ್ತ ಬೇಸಾಯ ಕೈಗೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.