TRENDING
Next
Prev

ಖ್ಯಾತ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ವಿಧಿವಶ

ಬೆಂಗಳೂರು: ಹಿರಿಯ ಕವಿ ಡಾ.ಸಿದ್ದಲಿಂಗಯ್ಯನವರು ಕೋವಿಡ್ ಸೋಂಕಿನಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿರುತ್ತಾರೆ.

ಕಳೆದ ಮೇ.2ರಂದು ಕೆಮ್ಮ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಂತ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಹೀಗಾಗಿ ಚಿಕಿತ್ಸೆಗಾಗಿ ರಂಗದೊರೆ ಆಸ್ಪತ್ರೆ, ಅಪೋಲೋ ಆಸ್ಪತ್ರೆ ಸೇರಿದಂತೆ ಅನೇಕ ಆಸ್ಪತ್ರೆಗಳಿಗೆ ಸುತ್ತಾಡಿದ್ದರೂ ಬೆಡ್ ಸಿಕ್ಕಿರಲಿಲ್ಲ. ಅಂತಿಮವಾಗಿ ಡಿಸಿಎಂ ಡಾ.ಸಿಎನ್ ಅಶ್ವತ್ಥ್ ನಾರಾಯಣಗೆ ವಿಷಯ ತಿಳಿಯುತ್ತಿದ್ದಂತೆ ಕರೆ ಮಾಡಿ, ಬೆಡ್ ವ್ಯವಸ್ಥೆ ಮಾಡಿದ್ದರಿಂದಾಗಿ ಮೇ.3ರಂದು ರಂಗದೊರೆ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ಬೆಡ್ ದೊರೆತು ಚಿಕಿತ್ಸೆ ಪಡೆಯುತ್ತಿದ್ದರು.

READ ALSO

ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ರಂಗದೊರೆ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನಾ ಸೋಂಕಿನಿಂದ ಗುಣಮುಖರಾಗಿ ಚೇತರಸಿಕೊಂಡರು ಎನ್ನುತ್ತಿರುವಾಗಲೇ, ಇಂದು ಚಿಕಿತ್ಸೆ ಫಲಕಾರಿಯಾಗೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದ ಸಿದ್ದಲಿಂಗಯ್ಯ ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿ ದಲಿತ ಕವಿ ಎಂದೇ ಹೆಸರು ಪಡೆದವರು. ಅಧ್ಯಾಪಕರಾಗಿ, ಕವಿಗಳಾಗಿ, ಹೋರಾಟಗಾರರಾಗಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಇವರು ಸಲ್ಲಿಸಿರುವ ಸೇವೆ ಅಪಾರ. ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಕೂಡ ಆಗಿದ್ದವರು ಇವರು. 1954ರಲ್ಲಿ ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ ಹುಟ್ಟಿದ್ದ ಸಿದ್ದಲಿಂಗಯ್ಯನವರು, ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾದವರು. ಶಾಲಾ ದಿನಗಳಿಂದಲೇ ಕವಿತೆ ಬರೆಯುವ ಹವ್ಯಾಸವುಳ್ಳವಾಗಿದ್ದ ಇವರು, ಅಂದಿನಿಂದಲೇ ಉತ್ತಮ ಭಾಷಣಕಾರರಾಗಿದ್ದರು.

‘ಹೊಲೆಮಾದಿಗರ ಹಾಡು’, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ‘ನನ್ನ ಜನಗಳು’ ಸೇರಿದಂತೆ ಹಲವು ಕವನ ಸಂಕಲಗಳನ್ನು ಸಿದ್ದಲಿಂಗಯ್ಯ ಅವರು ಹೊರತಂದಿದ್ದಾರೆ. ‘ಊರು-ಕೇರಿ’ ಎಂಬ ಆತ್ಮಕಥನವನ್ನು ಅವರು ರಚಿಸಿದ್ದಾರೆ. ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯು ಅಕಾಡೆಮಿ ಪ್ರಶಸ್ತಿ, ನಾಡೋಜ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ಅವರಿಗೆ ದೊರೆತಿವೆ.