ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ಜುಲೈ.19 ಮತ್ತು 22ರಂದು ಸರ್ಕಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಬಹುಆಯ್ಕೆ ಮಾದರಿಯ ಮೂಲಕ ಪರೀಕ್ಷೆ ನಡೆಸುತ್ತಿದೆ. ಇಂತಹ ಎಸ್ ಎಸ್ ಎಲ್ ಸಿ ಪರೀಕ್ಷೆಯಂದು, ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕಾರದಂತ ಶಿವಯೋಗಿ ಸಿ ಕಳಸದ ಸುತ್ತೋಲೆ ಹೊರಡಿಸಿದ್ದು, 2020-21ನೇ ಸಾಲಿನ ಕರ್ನಾಟಕದ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಗಳನ್ನು ಸರ್ಕಾರ ಆದೇಶದಂತೆ ದಿನಾಂಕ 19-07-2021 ಮತ್ತು 22-07-2021ರಂದು ನಡೆಸಲು ತೀರ್ಮಾನಿಸಿದ್ದು, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸುವಂತೆ ಕೋರಲಾಗಿರುತ್ತದೆ.
ಅದರನ್ವಯ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ನಿಗಮವು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಅಂದರೆ 19-07-2021 ಮತ್ತು 22-07-2021ರಂದು ಪರೀಕ್ಷೆಗೆ ಹಾಜರಾಗುವ ರಾಜ್ಯದ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ನಿಗಮದ ನಗರ, ಹೊರವರಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.