ತುಳುವೆರೆ ಪಕ್ಷ ಮತ್ತು ತುಳುನಾಡ್ ಒಕ್ಕೂಟ ಕಾರ್ಯಕರ್ತರ ಸಮಾಲೋಚನಾ ಸಭೆ

ಬೆಳ್ತಂಗಡಿ : ತುಳುವೆರೆ ಪಕ್ಷ ಮತ್ತು ತುಳುನಾಡ್ ಒಕ್ಕೂಟ ಕಾರ್ಯಕರ್ತರ ಸಮಾಲೋಚನಾ ಸಭೆಯು ಪಕ್ಷದ ಕೇಂದ್ರ ಕಛೇರಿಯಲ್ಲಿ ಶೈಲೇಶ್ ಆರ್.ಜೆ,ರವರ ಅಧ್ಯಕ್ಷತೆಯಲ್ಲಿ ನಡೆಯಿತು, ತುಳುನಾಡಿನಾದ್ಯಂತ ಪಕ್ಷ ಸಂಘಟನೆಯ ಬಗ್ಗೆ ವಿಸ್ತ್ರತ ಚರ್ಚೆ ನಡೆಯಿತು.

ತುಳುವೆರೆ ಪಕ್ಷದ ಅಧ್ಯಕ್ಷರಾದ ಶೈಲೇಶ್ ಆರ್.ಜೆ.ಯವರು ಮಾತಾನಾಡಿ ಭಾಷಾವಾರು ರಾಜ್ಯಗಳ ರಚನೆಯ ಸಂಧರ್ಭದಲ್ಲಿ ತುಳು ಭಾಷೆಗೆ ರಾಜ್ಯ ನೀಡದೆ ರಾಷ್ಟ್ರೀಯ ಪಕ್ಷಗಳು ತುಳುವರಿಗೆ ಅನ್ಯಾಯವೆಸಗಿವೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಮೀನ ಮೇಷ ಎಣಿಸುತ್ತಿರುವುದು ತುಳು ಭಾಷೆಯ ನಾಶಕ್ಕೆ ಮುನ್ನುಡಿ ಬರೆದಂತೆ ತುಳುವರಿಗೆ ಭಾಸವಾಗುತ್ತಿದೆ ಎಂದು ವಿವರಿಸಿದರು. ತುಳು ಚಳುವಳಿಯು ಪ್ರತಿ ಹಳ್ಳಿ ಪಟ್ಟಣಗಳಲ್ಲಿ ಚಿಗುರೊಡೆಯುತ್ತಿದ್ದು ಮುಂದಿನ ದಿನಗಳಲ್ಲಿ ತುಳುವೆರೆ ಪಕ್ಷದ ರೂಪದಲ್ಲಿ ಹೆಮ್ಮರವಾಗಿ ಬೆಳೆಯಲಿದೆ ಎಂದು ತಿಳಿಸಿದರು, ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಾ ಹಂತಗಳಲ್ಲಿ ತುಳು ಭಾಷೆ ಮತ್ತು ತುಳು ಲಿಪಿಯ ಅನುಷ್ಠಾನಕ್ಕೆ ಕಾರ್ಯಕರ್ತರು ಹೋರಾಡಬೇಕು ಎಂದು ತಿಳಿಸಿದರು. ತುಳುವೆರೆ ಪಕ್ಷವನ್ನು ವಾರ್ಡ್ ಮಟ್ಟದಲ್ಲಿಯೆ ಸಂಘಟನಾತ್ಮಕವಾಗಿ ಕಟ್ಟುವ ಮೂಲಕ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸುವಂತೆ ತಂತ್ರಗಾರಿಕೆ ರೂಪಿಸುವುದು ಕಾರ್ಯಕರ್ತರ ಜವಾಬ್ದಾರಿ ಎಂದು ತಿಳಿಸಿದರು.

READ ALSO

ಈ ಸಂಧರ್ಭದಲ್ಲಿ ವೇಣೂರು ಹೋಬಳಿ ವ್ಯಾಪ್ತಿಯನ್ನೊಳಗೊಂಡ ಪಕ್ಷದ ಏನೂರು ಸೀಮೆಯ ಅಧ್ಯಕ್ಷರಾಗಿ ಉದಯ ಗೋಳಿಯಂಗಡಿ ಮತ್ತು ಬೆಳ್ತಂಗಡಿ ಹೋಬಳಿ ವ್ಯಾಪ್ತಿಯನ್ನೊಳಗೊಂಡ ಪಕ್ಷದ ಬೋಲ್ತೇರ್ ಸೀಮೆಯ ಅಧ್ಯಕ್ಷರಾಗಿ ಕೆ.ಎಂ. ಮೊಹಮ್ಮದ್ ಶರೀಫ್ ಮತ್ತು ಉಪಾಧ್ಯಕ್ಷರಾಗಿ ರಮೇಶ್ ಸಾಲಿಯಾನ್ ಉಜಿರೆ ಆಯ್ಕೆಯಾದರು. ತುಳುನಾಡ್ ಒಕ್ಕೂಟ ತಾಲೂಕು ಘಟಕದ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ ಜೊತೆ ಕಾರ್ಯದರ್ಶಿ ಜಿ.ವಿ. ಹರೀಶ್ ಸವಣಾಲು, ಪಕ್ಷದ ಕರಂಬಾರು ಗ್ರಾಮ ಸಮಿತಿಯ ಅಧ್ಯಕ್ಷರಾದ ಉಮೇಶ್ ಕುಲಾಲ್ ಮತ್ತು ಪಕ್ಷದ ಇಂದಬೆಟ್ಟು ಗ್ರಾಮ ಸಮಿತಿಯ ಅಧ್ಯಕ್ಷರಾದ ಸುಜಿತ್ ಮೊಯಿಲಿ ಬಂಗಾಡಿ ಇವರುಗಳು ಪಕ್ಷ ಸಂಘಟನೆ, ಚುನಾವಣೆ ತಯಾರಿ ಬಗ್ಗೆ ಅಭಿಪ್ರಾಯಗಳನ್ನು ಮಂಡಿಸಿದರು. ಪಕ್ಷ ಮತ್ತು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.