ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಯು ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿಗೆ ಇನ್ನು 12 ದಿನಗಳಷ್ಟೇ ಬಾಕಿ ಉಳಿದಿದ್ದು, ಲೀಗ್ ಹಂತದ ಎಲ್ಲ 56 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ಲೇಆಫ್ ಹಂತದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 10ರಂದು ನಿಗದಿಯಾಗಿದೆ.
ವಿರಾಟ್ ಕೊಹ್ಲಿ ಸಾರಥ್ಯದ ಆರ್ಸಿಬಿ ತಂಡ ಸೆಪ್ಟೆಂಬರ್ 21ರಂದು ಸನ್ರೈಸರ್ಸ್ ತಂಡದ ವಿರುದ್ಧ ದುಬೈನಲ್ಲಿ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಸೆಪ್ಟೆಂಬರ್ 20ರಂದು ಟೂರ್ನಿಯ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸೆಣಸಲಿವೆ.
53 ದಿನಗಳ ಟೂರ್ನಿಯಲ್ಲಿ 60 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ. ಎಂದಿನಂತೆ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಅಗ್ರ 4 ತಂಡಗಳು ಪ್ಲೇಆಫ್ ಹಂತಕ್ಕೇರಲಿವೆ.