ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯು ಕಳೆದ ವರ್ಷದಿಂದ ಹಡಿಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯುವ ಜೊತೆಗೆ ತರಕಾರಿ ಬೆಳೆಯುವ ಮೂಲಕ ಇತರರಿಗೆ ಮಾದರಿಯಾಗಿದೆ.
ರಾಷ್ಟ್ರ ಮಟ್ಟದ ಕೃಷಿ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಪ್ರಭಾಕರ್ ಮಯ್ಯ ಅವರ ಮಾರ್ಗದರ್ಶನದಲ್ಲಿ ತರಕಾರಿ ಕೃಷಿ ನಡೆಸಲಾಗುತ್ತಿದೆ. ಬೆಳ್ತಂಗಡಿ ಕಸಬಾ ಗ್ರಾಮದ ಕೋರ್ಟ್ ರಸ್ತೆಯಲ್ಲಿ ಹಡಿಲು ಬಿದ್ದ ಗದ್ದೆ ಈಗ ತರಕಾರಿ ಗಿಡಗಳಿಂದ ಹಚ್ಚಹಸಿರು ತುಂಬಿದೆ.
ಮಹಿಳೆಯರೇ ಕೆಲಸಗಾರರು: ತರಕಾರಿ ಸಾಲು ನಿರ್ಮಾಣ, ಬಿತ್ತನೆ ಸೇರಿದಂತೆ ಇಲ್ಲಿ ಮಾಡುವವರು ಮಹಿಳೆಯರೇ ಸಿಂಹಪಾಲು. ನ್ಯಾಯವಾದಿ ಸುಕನ್ಯಾ ಹೆಚ್ ಅವರ ಸಾರಥ್ಯದಲ್ಲಿ ನಿರುದ್ಯೋಗಿ ಮಹಿಳೆಯರನ್ನು ಕೃಷಿ ಚಟುವಟಿಕೆಗಳಲ್ಲಿ ಉಪಯೋಗಿಸುವ ವಿನೂತನ ಪ್ರಯತ್ನ ನಡೆಸುತ್ತಿದ್ದಾರೆ.
ಕಂಪನಿ/ಬ್ಯಾಂಕ್ ಸಿಬ್ಬಂದಿಗಳು ಭಾಗಿ: ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕ ಕಂಪನಿ ಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ(ನಿ) ದ ಸಿಬ್ಬಂದಿಗಳು ಪ್ರತಿ ಆದಿತ್ಯವಾರ ತರಕಾರಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆ ಮೂಲಕ ಸಾಮುದಾಯಿಕ ಒಳಗೊಂಡು ಗ್ರಾಮೀಣ ಕೃಷಿ ಪದ್ದತಿಯನ್ನು ಉಳಿಸುವ ಪ್ರಯತ್ನ ನಡೆಸಲಾಗುತ್ತಿದೆ.
ವಿವಿಧ ಬಗೆಯ ತರಕಾರಿ: ಹಡಿಲು ಬಿದ್ದ ಗದ್ದೆಯಲ್ಲಿ ಅಳಸಂಡೆ , ಬೆಂಡೆಕಾಯಿ , ಆಗಲಕಾಯಿ , ಸೌತೆಕಾಯಿ, ಮುಳ್ಳುಸೌತೆ , ಬಸಲೆ , ಅರಿವೆ ಸೊಪ್ಪು , ಬದನೆಕಾಯಿ, ಕುಂಬಳಕಾಯಿ, ಕಲ್ಲಂಗಡಿ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಳೆಯಲಾಗಿದೆ.
ಸ್ಪೂರ್ತಿಯಲ್ಲಿ ಮಾರಾಟ: ಬೆಳೆದ ತರಕಾರಿಗಳನ್ನು ಮಾರಾಟ ಮಾಡಲೆಂದೇ ಕಳೆದ ವರ್ಷದ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕೋರ್ಟ್ ರಸ್ತೆಯಲ್ಲಿರುವ ಇಎಂಎಸ್ ಭವನದಲ್ಲಿ “ಸ್ಪೂರ್ತಿ” ತರಕಾರಿ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ. ಕಳೆದ ವರ್ಷ ತಾಲೂಕಿನ ರೈತರು ಬೆಳೆದ ತರಕಾರಿ, ಅನನಾಸು ಕೊಳೆತು ಹೋಗುವ ಸಂದರ್ಭದಲ್ಲಿ ಸ್ಪೂರ್ತಿ ತರಕಾರಿ, ಅನನಾಸುಗಳನ್ನು ಪಡೆದುಕೊಂಡು ರಾಜ್ಯದ ವಿವಿಧೆಡೆ ಮಾರಾಟ ಮಾಡುವ ರೈತರಿಗೆ ಬೆಳಕಾಗಿ ನಿಂತಿತ್ತು. ರೈತರು ಬೆಳೆದ ಯಾವುದೇ ಬೆಳೆಗಳಿಗೆ ಉತ್ತಮ ಬೆಲೆಯನ್ನು ತೆಗೆದುಕೊಡಲು ಈ ಕಂಪನಿ ಶಕ್ತಿಮೀರಿ ದುಡಿಯುತ್ತಿದೆ.
ಸಾವಯವ ಗೊಬ್ಬರವನ್ನು ಮಾತ್ರ ಉಪಯೋಗಿಸುವ ಮೂಲಕ ತರಕಾರಿ ಬೆಳೆಯಲಾಗುತ್ತಿದ್ದು , ಯಾವುದೇ ರೀತಿಯ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸುವುದಿಲ್ಲ ಎನ್ನುತ್ತಾರೆ ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಹರಿದಾಸ್ ಎಸ್. ಎಂ ರವರು.