ಧಾರವಾಡ: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೂ.30ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಬಗ್ಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಚಿಂತನೆ ನಡೆಸುತ್ತಿದೆ.
ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೂ.30ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಹೇಳಿದರು.
ನಗರದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ರೂ. ಮಾಸಿಕ ಗೌರವ ಧನ ನಿಗದಿ ಮಾಡಬೇಕು. ಈ ಬಗ್ಗೆ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರಕಾರ ಮಾತ್ರ ಕೇವಲ ಆಶ್ವಾಸನೆ8 ನೀಡುತ್ತಿದೆ. ಇದೀಗ ಕೊರೋನಾ ಹಾವಳಿ ಮಧ್ಯೆಯೂ ಕಾರ್ಯಕರ್ತೆಯರು ಸಮೀಕ್ಷೆ ಕಾರ್ಯದಲ್ಲಿತೊಡಗಿದ್ದಾರೆ. ಆದರೆ ಸರಕಾರ ಅವರಿಗೆ ಅಗತ್ಯ ಸುರಕ್ಷತಾ ವಸ್ತುಗಳನ್ನು ನೀಡದೆ ಅವರ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.
ಹೀಗಾಗಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೂ.30ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕೇಂದ್ರಗಳಲ್ಲಿತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ನಂತರ ಜು.1ರಿಂದ 7ರವರೆಗೆ ಜನಪ್ರತಿನಿಧಿಗಳನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಮನವೊಲಿಸುವಂತೆ ಮನವಿ ಮಾಡಲಾಗುವುದು. ಆದರೂ ಸರಕಾರ ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಎಲ್ಲ ಆರೋಗ್ಯ ಸೇವೆಗಳನ್ನು ಬಂದ್ ಮಾಡಿ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುನಂದಾ ವಾಲೀಕಾರ, ಮಂಜುಳಾ ಸಾವಂತ, ದುರ್ಗಮ್ಮ ಹುಬ್ಬಳ್ಳಿ, ಭುವನಾ ಬಳ್ಳಾರಿ, ಸುಜಾತಾ ಕೊಟಬಾಗಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.