ಬಜೆ ‘ಏರೇಸಿ’ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಇದು ಸಾಮಾನ್ಯವಾಗಿ ತಗ್ಗು ಪ್ರದೇಶದಲ್ಲಿ ಬೆಳೆಯುತ್ತದೆ. ನೀರಿನಂಶ ಜಾಸ್ತಿ ಇರುವ ಕಡೆ ಬೆಳೆಯುತ್ತದೆ. ಈ ಬೆಳೆಯು ವಾಣಿಜ್ಯವಾಗಿ ರಷ್ಯಾ, ಮಧ್ಯ ಯೂರೋಪ್, ರುಮೇನಿಯ, ಭಾರತ ಮತ್ತು ಜಪಾನ್ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಬಜೆ, ಕರ್ನಾಟಕ, ಮಣಿಪುರ, ಅರುಣಚಲಪ್ರದೇಶ, ಮೇಘಾಲಯ ಮತ್ತು ಹಿಮಾಲಯ ತಪ್ಪಲಲ್ಲಿ ೧೮೦೦ಮೀ. ಎತ್ತರದಲ್ಲಿ ಬೆಳೆಯಲಾಗುತ್ತದೆ.
ಕರ್ನಾಟಕದ ತುಮಕೂರು, ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿ ಗದ್ದೆಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಇದು ದೇಹಕ್ಕೆ ತುಂಬಾ ತಂಪು ಇದು ನೀರಿನಾಸರೆ ಇರುವ ಕಡೆ ಬೆಳೆಯುವ ಸಸಿಯಾಗಿದೆ. ಹಾಸನ, ತುಮಕೂರು, ಕೊರಟಗೆರೆ, ಮಧುಗಿರಿ ತಾಲೂಕುಗಳಲ್ಲಿ ಗದ್ದೆಗಳಲ್ಲಿ ಬಜೆಯನ್ನು ಬೆಳೆಸುತ್ತಾರೆ.
ಎಲೆಗಳು ಹಸಿರು ಮತ್ತು ಉದ್ದವಾಗಿದ್ದು ಚಿಕ್ಕ ಕಬ್ಬಿಣ ಪತ್ರಗಳನ್ನು ಹೋಲುತ್ತವೆ, ಬಢರುಗಳು ಗಂಟು ಗಂಟಾಗಿ ಉದ್ದವಾಗಿರುವುವು. ಬೇರುಗಳ ಮೇಲೆ ಮಾಸಲು ಬಣ್ಣದ ರೋಮಗಳಿರುವುವು, ಬೇರುಗಳಿಗೆ ಸುವಾಸನೆಯಿರುವುದು. ರುಚಿ ಖಾರವಾಗಿರುವಿದು. ಹೂಗಳು ಸಣ್ಣ ಸಣ್ಣದಾಗಿದ್ದು ತಿಳಿ ಹಸಿರಾಗಿರುವುವು. ಗ್ರಾಮವಾಸಿಗಳಿಗೆ, ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ, ಸಣ್ಣ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಜೆ ಇದ್ದೇ ಇರುತ್ತದೆ.
ಭತ್ತ ಬೆಳೆಯುವ ಮಣ್ಣುಗಳಾದ ಜೇಡಿ, ಗೋಡು ಮತ್ತು ಮೆಕ್ಕಲು ಮಣ್ಣಿನಲ್ಲಿ ಬೆಳೆಯಬಹುದು ಹಾಗೂ ನೀರಾವರಿ ಇರುವ ಅಥವಾ ನದೀ ತೀರದಲ್ಲೂ ಬೆಳೆಯಬಹುದು.
ಬಜೆಗಿಡದ ಕಂದುಗಳನ್ನು ಕತ್ತರಿಸಿ ತುಂಡು ಮಾಡಿ ಒಣಗಿಸಿ ಮಾರಾಟ ಮಾಡಲಾಗುತ್ತದೆ ಈ ಕಂದುವೇ ಔಷಧಿಗೆ ಮುಖ್ಯವಾಗಿದೆ.
ಬಜೆಯನ್ನು ಸುಟ್ಟು ಭಸ್ಮವನ್ನು ಮಾಡಿ, ಅರ್ಧ ಚಮಚ ಭಸ್ಮಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿವಸಕ್ಕೆ ೨-೩ ವೇಳೆ ತಿನ್ನುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ.
ಬಜೆಯನ್ನು ತೇಯ್ದು ತುಪ್ಪದೊಡನೆ ಕಲಸಿ ಮಕ್ಕಳಿಗೆ ತಿನ್ನಿಸುವುದರಿಂದ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣ 10ಗ್ರಾಂ ನಷ್ಟನ್ನು ದಿವಸಕ್ಕೊಮ್ಮೆ ಬೆಳಗ್ಗೆ ಬಿಸಿ ನೀರಿನಲ್ಲಿ ಅಥವಾ ಜೇನಿನಲ್ಲಾಗಲೀ ಇಟ್ಟು ೪೦ ದಿನ ಸೇವಿಸಿದರೆ ಮೂರ್ಛೆ ಗುಣವಾಗುತ್ತದೆ.
ಬಜೆಯನ್ನು ಅರೆದು ಲೇಪಿಸುವುದರಿಂದ, ಸಂಧಿವಾತ ಮತ್ತು ಲಕ್ವ ಗುಣವಾಗುತ್ತದೆ. ಹಸಿ ಬಜೆಯ ರಸವನ್ನು ಕಿವಿಗೆ ಹಿಂಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.
ಬಜೆ, ನಾಗಕೇಸರಿ, ಹಿಪ್ಪಲಿ ಬೇರಿನ ಚೂರ್ಣಗಳನ್ನು ಸೇರಿಸಿ ಸೇವಿಸಿದರೆ ಸುಖ ಪ್ರಸವವಾಗುತ್ತದೆ.
ಬಜೆ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ. ಬಜೆಯ ಕಷಾಯ ಸೇವನೆಯಿಂದ ಮೂತ್ರಕೋಶದ ಕಲ್ಲು ಕರಗಿ ಹೋಗುತ್ತದೆ. ಮೂತ್ರ ಬಂಧವೂ ನಿವಾರಣೆಯಾಗುತ್ತದೆ.
ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ.
ಬಜೆ ಮತ್ತು ಸೈಂಧಲವಣ ಇವೆರಡನ್ನು ನೀರಿನೊಡನೆ ಕುಡಿಯುವುದರಿಂದ ಕಫ ವಾಂತಿಯಾಗಿ ಕೆಮ್ಮು ಶಮನವಾಗುತ್ತದೆ.
ಬಜೆಯ ಗಂಧ ತಯಾರಿಸಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು ಮತ್ತು ಮೂಲವ್ಯಾಧಿ ಗುಣವಾಗುತ್ತದೆ.
ಒಂದು ತಿಂಗಳಿಂದ ಆರು ತಿಂಗಳ ಮಕ್ಕಳಲ್ಲಿ ಭೇದಿಯಾಗುತ್ತಿದ್ದಲ್ಲಿ ಹಾಗೂ ಹೊಟ್ಟೆ ಉಬ್ಬರವಿದ್ದಲ್ಲಿ ಬಜೆ ಪುಡಿಯನ್ನು ಹರಳೆಣ್ಣೆಯಲ್ಲಿ ಬೆರೆಸಿ ಹೊಟ್ಟೆಯ ಮೇಲೆ ಲೇಪಿಸಬೇಕು.