ಉಡುಪಿ: ರಾಜ್ಯದ ನಗರ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರಿನಲ್ಲಿ 350 ಎಲೆಕ್ಟ್ರಿಕ್ ಬಸ್ ಗಳನ್ನು ಲೀಸ್ ಗೆ ಪಡೆದು ಓಡಾಟ ಆರಂಭಿಸಲು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು , ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಪ್ರಾಯೋಗಿಕವಾಗಿ ಸಂಚಾರ ಆರಂಭಗೊಳ್ಳಲಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಭಾನುವಾರ, ಉಡುಪಿಯಲ್ಲಿ, 395 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ಮಾಲಿನ್ಯ ಹೆಚ್ಚಿರುವ ದೇಶದ ಪ್ರಮುಖ ನಗರಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಬಸ್ ಗಳ ಬಳಕೆ ಮಾಡುವ ಕುರಿತಂತೆ ಪ್ರೋತ್ಸಾಹ ನೀಡುತ್ತಿದ್ದು, ಇದಕ್ಕಗಿ ಬಸ್ ಖರೀದಿಗೆ 55 ಲಕ್ಷ ರೂ ಸಬ್ಸಿಡಿ ನೀಡಲಿದೆ, ಅದೇ ರೀತಿ ರಾಜ್ಯವೂ ಸಹ ಪ್ರತೀ ಬಸ್ ಗೆ 33 ಲಕ್ಷ ರೂ ಸಬ್ಸಿಡಿ ನೀಡಲಿದ್ದು, ಒಂದು ಎಲೆಕ್ಟ್ರಿಕ್ ಬಸ್ ನ ಬೆಲೆ ರೂ.2 ಕೋಟಿ ಅಗಲಿದ್ದು, ಒಟ್ಟು 88 ಲಕ್ಷ ರೂ ಗಳ ಸಬ್ಸಿಡಿ ದೊರೆಯಲಿದೆ, ಇದರಿಂದ ಇಂದನ ವೆಚ್ಚ ತಗ್ಗಿಸಲು ಹಾಗೂ ಮಾಲಿನ್ಯ ನಿಯಂತ್ರಣ ಸಾಧ್ಯವಾಗಲಿದ್ದು, ಲಾಭದಾಯಕ ಸಹ ಆಗಲಿದೆ. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ 350 ಬಸ್ ಗಳನ್ನು ಲೀಸ್ ಗೆ ಪಡೆದು, ಪ್ರತೀ ಕಿಮೀ ಹೂಡಿಕೆದಾರರಿಗೆ ನಿಗಧಿತ ದರ ನೀಡುವ ಒಪ್ಪಂದದಲ್ಲಿ ಆರಂಭಿಸಲಿದ್ದು, ಮುಂದೆ ಇದನ್ನು ರಾಜ್ಯದ ಎಲ್ಲಾ ನಗರ ಸಾರಿಗೆಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ರಾಜ್ಯದ ಸಾರಿಗೆ ನೌಕರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದ್ದು, ಅವರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಇಂಧನದಲ್ಲಿ ಶೇ.20 ರಷ್ಟು ಇಥೆನಾಲ್ ಮಿಶ್ರಣ ಮಾಡುವುದರಿಂದ ಬಸ್ ಗಳ ಇಂಧನ ವೆಚ್ಚ ತಗ್ಗಿಸಲು ಸಾಧ್ಯವಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಕೊವೀಡ್ ಲಾಕ್ ಡೌನ್ ಸಮಯದಲ್ಲಿ ಸಾರಿಗೆ ಸಂಚಾರ ಇಲ್ಲದಿದ್ದರೂ ಸಹ ಸಾರಿಗೆ ನೌಕರರಿಗೆ ವೇತನ ನೀಡಲಾಗಿದೆ, ಇದಕ್ಕಾಗಿ ಸರ್ಕಾರದಿಂದ 2 ತಿಂಗಳ ವೇತನಕ್ಕಾಗಿ 650 ಕೋಟಿ ರೂ ನೆರವು ಪಡೆಯಲಾಗಿದೆ, ರಾಜ್ಯದಲ್ಲಿ ಎಲೆಕ್ಟಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂತಹ ವಾಹನಗಳ ರಸ್ತೆ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತಿದೆ ರಾಜ್ಯದಲ್ಲಿ ಪ್ರಸ್ತುತ 26000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳಿವೆ ಎಂದು ಸಚಿವರು ಹೇಳಿದರು.
ಉಡುಪಿಯ ಬನ್ನಂಜೆಯಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಡಾ.ವಿ.ಎಸ್.ಆಚಾರ್ಯ ಹೆಸರು ಇಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು, ಜಿಲ್ಲೆಯ ಟ್ಯಾಕ್ಸಿ ಮಾಲೀಕರು ನೀಡಿರುವ ಮನವಿಗಳ ಬಗ್ಗೆ ಅಧಿವೇಶನ ಸಂದರ್ಭದಲ್ಲಿ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.