ಭಾಗವತ ಕಥೆಗಳು ಬಾಲಕೃಷ್ಣನ ಅದ್ಭುತ ಲೀಲೆಗಳು

ಕಂಸನಿಗೆ ಈಗ ತನ್ನ ಮೃತ್ಯುಪ್ರಾಯ ಶತ್ರುವಿನ ಭಯ ಹೆಚ್ಚಿತು. ಆ ಶತ್ರುವನ್ನು ಎಲ್ಲಿದ್ದರೂ ಹುಡುಕಿ, ಹಿಡಿದು ತರಲು ತನ್ನ ಮಂತ್ರಿಗಳು, ಸೇನಾಧಿಪತಿಗಳು ಎಲ್ಲರಿಗೂ ಕಟ್ಟಾಜ್ಞೆ ನೀಡಿದ. ಇದೇ ಸಂದರ್ಭದಲ್ಲಿ ಗೋಕುಲದಲ್ಲಿ ನಂದಗೋಪನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಗೋಪಗೋಪಿಯರೆಲ್ಲರೂ ಯಶೋದೆ ಹಡೆದ ಮುದ್ದು ಮಗುವನ್ನು ಕಂಡು ಅಲೌಕಿಕ ಆನಂದ. ನಂದಕಟ್ಟಳೆಯಂತೆ ಪುತ್ರೋತ್ಸವದ ಸಂದರ್ಭದಲ್ಲಿ ಮಥುರೆಗೆ ತೆರಳಿ, ವಿಷಯವನ್ನು ತಿಳಿಸಿ, ಕಂಸರಾಜನಿಗೆ ಕಾಣಿಕೆಗಳನ್ನು ಮಾಮೂಲಿನಂತೆ ಕೊಟ್ಟು ಬಂದ.

ನಂದನ ಬಗ್ಗೆ ಕಂಸನಿಗೆ ಅನುಮಾನ ಮೊದಲೇ ಇತ್ತು. ಅವನ ಮನೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಗ್ಗೆ ಗೋಕುಲವಾಸಿಗಳೆಲ್ಲರೂ ಆನಂದಿಸುತ್ತಿರುವ ವಿಷಯವೂ ಕಿವಿಗೆ ಬಿದ್ದಿತ್ತು. ಆ ಮಗುವೇ ಆಶರೀರವಾಣಿಯಂತೆ ತನ್ನ ಮೃತ್ಯು ಏಕಿರಬಾರದು? ಎಂಬ ಶಂಕೆ ಹೆಚ್ಚತೊಡಗಿತು. ನಂದನು ಮಥುರೆಗೆ ಬಂದಿರುವ ಸಮಯದಲ್ಲಿ ಪೂತನಿ ಎಂಬ ರಕ್ಕಸಿಯನ್ನು ಪ್ರೇರೇಪಿಸಿ, ಮಗುವನ್ನು ಉಪಾಯಾಂತರದಿಂದ ಕೊಂದು ಬರಲು ಕಳುಹಿಸಿಕೊಟ್ಟ. ಪೂತನಿಯೂ ಕಾರ್ಯನಿರತಳಾಗಿ ಗೋಕುಲಕ್ಕೆ ಬಂದಳು. ರಕ್ಕಸಿ ಆಗಿದ್ದವಳು ಗೊಲ್ಲತಿಯ ರೂಪ ತಾಳಿದಳು. ಯಶೋದೆಯ ಪ್ರೀತ್ಯಾದರವನ್ನೂ ತನ್ನ ಚಾಕಚಕ್ಯತೆಯಿಂದ ಸಂಪಾದಿಸಿದಳು. ಅವಳಿಲ್ಲದಿರುವ ಸಮಯದಲ್ಲಿ ಮಗುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು, ಮೊಲೆ ಹಾಲು ಉಣಿಸತೊಡಗಿದಳು. ಇದೇ ಸಂದರ್ಭದಲ್ಲಿ ಮಗು ಹಾಲು ಕುಡಿಯುತ್ತಿದ್ದಂತೆ ಅದರ ಕುತ್ತಿಗೆಯನ್ನು ನಿಧಾನವಾಗಿ ಕಿವುಚತೊಡಗಿದಳು. ಇದೇನು ಸಾಮಾನ್ಯ ಮಗುವೇ? ವಿಷ್ಣುವಿನ ಅವತಾರ! ಅವಳು ಹಾಗೆ ಕಿವುಚಲು ಯತ್ನಿಸುತ್ತಿದ್ದಂತೆ ತಾನೂ ಸಹ ಅವಳ ಮೊಲೆಯ ಭಾಗವನ್ನು ಹಾಲು ಕುಡಿಯುತ್ತಿರುವಂತೆ ನಟಿಸುತ್ತಾ, ತನ್ನ ಕೋಮಲ ಕೈಗಳಿಂದ ಜೋರಾಗಿ ಕಿವುಚತೊಡಗಿತು. ನೋವನ್ನು ತಾಳಲಾರದೆ ಆ ಸುಂದರಿರೂಪದ ಗೊಲ್ಲತಿ ದೈತ್ಯಾಕಾರದಲ್ಲಿ ಸತ್ತುಬಿದ್ದಳು. ಅದೇ ವೇಳೆಗೆ ಯಶೋದ ಬಂದಳು. ಪೂತನಿಯ ಕೊನೆ ಗಳಿಗೆಯ ಚೀತ್ಕಾರವನ್ನು ಕೇಳಿದ ಗೊಲ್ಲ-ಗೊಲ್ಲತಿಯರೆಲ್ಲರೂ ಬಂದರು. ನಂದನೂ ಬಂದ. ನಡೆದಿರುವುದನ್ನು ಕಂಡು ಎಲ್ಲರೂ ಮೂಕರಂತಾದರು. ಇನ್ನೊಮ್ಮೆ ಕಂಸನಿಂದಲೇ ಪ್ರೇರಿತನಾದ ತೃಣಾವರ್ತನೆಂಬ ರಾಕ್ಷಸನು ಮಗು ರೂಪದ ಕೃಷ್ಣನನ್ನು ತನ್ನ ಮಾಯೆಯಿಂದ ರಭಸದ ಗಾಳಿಯ ರೂಪದಲ್ಲಿ ಬಂದು, ಆಕಾಶಕ್ಕೆ ಹಾರಿಸಿಕೊಂಡು ಹೋದ. ಕೃಷ್ಣನು ಅವನ ಕೊರಳನ್ನೇ ಬಿಗಿಯಾಗಿ ಅದುಮಿ ಸಾಯಿಸಿದ. ರಾಕ್ಷಸ ತನ್ನ ನಿಜರೂಪದಲ್ಲಿ ದೊಡ್ಡ ಮರ ಉರುಳಿ ಬೀಳುವಂತೆ ಸತ್ತುಬಿದ್ದ. ಮಗು ಕೃಷ್ಣನೂ ಅವನ ಎದೆಯ ಮೇಲೆ ನಲಿದಾಡುತ್ತಿತ್ತು. ಇದೆಲ್ಲವನ್ನೂ ಕಂಡ ಗೋಕುಲವಾಸಿಗಳು ದಿಗ್ಬ್ರಾಂತರಾದರು. ನಂದ-ಯಶೋದೆಯರಿಗಂತೂ ಮಗುವಿನ ಬಗ್ಗೆ ಕಳವಳ ಹೆಚ್ಚತೊಡಗಿತು.

ಕೃಷ್ಣ ಈಗ ಆರೇಳು ವರ್ಷದ ಹುಡುಗ. ತುಂಬಾ ತುಂಟನಾಗಿದ್ದ. ಅವನ ತುಂಟತನವನ್ನು ತಾಳಲಾರದೆ, ಯಶೋದ ಒಂದು ದಿನ ಅವನನ್ನು ಮನೆಯ ಮುಂದೆಯೇ ಗಾಡಿಯ ಚಕ್ರಕ್ಕೆ ಕಟ್ಟಿ ಮನೆಗೆಲಸದಲ್ಲಿ ನಿರತಳಾಗಿದ್ದಳು. ಗಾಡಿ ಇದ್ದಕ್ಕಿದ್ದಂತೆ ಯಾರ ನೆರವೂ ಇಲ್ಲದೆ ಮುಂದೆ ಮುಂದೆ ಹೋಗತೊಡಗಿತು. ಉರುಳುತ್ತಿದ್ದ ಚಕ್ರವನ್ನು ಹಿಡಿದು ಕೃಷ್ಣ ತಾನೂ ಓಡೋಡಿ ಹೋಗತೊಡಗಿದ. ಇದನ್ನು ಕಂಡ ಗೊಲ್ಲಬಾಲರು ವಿಷಯವನ್ನು ನಂದ ಯಶೋದೆಯರಿಗೆ ತಿಳಿಸಿದರು. ಬಾಲಕೃಷ್ಣ ಈಗ ಗಾಡಿಯ ಮೇಲೇರಿದ್ದಾನೆ. ಗಾಡಿ ವೇಗವಾಗಿ ಮುಂದೆ ಮುಂದೆ ಸಾಗುತ್ತಲೇ ಇದೆ! ಎಲ್ಲರೂ ಇದೇನು ಗಂಡಾಂತರವೋ! ಎಂದು ಬೇಗಬೇಗ ಹೆಜ್ಜೆ ಹಾಕುತ್ತಾ ಬರುತ್ತಿದ್ದಂತೆ ಒಂದೆಡೆ ಗಾಡಿ ನಿಂತಿತು. ಸಿಡಿಲಿನ ಶಬ್ದವಾಯಿತು. ಗಾಡಿ ಕಾಣಲಿಲ್ಲ. ಗಾಡಿಯ ಜಾಗವೂ ಕಂಸನಿಂದ ಪ್ರೇರಿತನಾಗಿ ಬಂದಿದ್ದ ಶಕಟ (ಗಾಡಿ) ಎಂಬ ಅಸುರ ತನ್ನ ನಿಜರೂಪದಲ್ಲಿ ಕೆಳಗೆ ಸತ್ತುಬಿದ್ದಿದ್ದ. ಅವನ ಎದೆಯ ಮೇಲೆ ಕೃಷ್ಣ ಕುಣಿದಾಡುತ್ತಿದ್ದ. ಎಲ್ಲರಿಗೂ ಏಕಕಾಲದಲ್ಲಿ ಆನಂದಾಶ್ಚರ್ಯ ಉಂಟಾಯಿತು. ಯಶೋದ ಮಗನನ್ನು ಬರಸೆಳೆದು ಮನೆಗೆ ಕರೆದೊಯ್ದಳು. ದೃಷ್ಟಿ ತೆಗೆದಳು.

ಹೀಗೆ ಕಂಸನ ಕಡೆಯ ರಾಕ್ಷಸರು ಮೇಲಿಂದ ಮೇಲೆ ಬಂದು ಕೃಷ್ಣನಿಗೆ ಹಿಂಸೆ ಕೊಡುವುದನ್ನು ಕಂಡು, ನಂದಗೋಪ ತನ್ನ ಕುಟುಂಬ ಹಾಗೂ ರೋಹಿಣಿ ಮತ್ತು ಪರಿಜನರೊಡನೆ ಬೃಂದಾವನಕ್ಕೆ ವಲಸೆ ಬಂದ. ಬೃಂದಾವನ ಜಲಸಮೃದ್ಧಿಯ ಜಾಗ. ಪ್ರಕೃತಿಯ ಪ್ರಫುಲ್ಲ ಪ್ರಾಂಗಣ. ಯಮುನಾ ನದಿಯ ತೀರದಲ್ಲಿ ಕಂಗೊಳಿಸುತ್ತಿತ್ತು. ಅಲ್ಲಿಯೇ ಇದ್ದ ಗೋವರ್ಧನಗಿರಿ ಕೃಷ್ಣನಿಗೆ ಗೊಲ್ಲರೊಂದಿಗೆ ಆಟ ಆಡಲು ಒಳ್ಳೆಯ ಗುಡ್ಡ ಆಗಿತ್ತು. ಅಲೌಕಿಕ ಆನಂದ ನೀಡುತ್ತಿದ್ದ. ಅವರೊಂದಿಗೆ ಯಮುನಾ ನದಿಯಲ್ಲಿ ಜಲಕ್ರೀಡೆ ಆಡುವುದೆಂದರೆ ಅವನಿಗೆ ತುಂಬಾ ಒಲವು.

ಅಲ್ಲೊಂದು ಮಡು ಇತ್ತು. ಅದರಲ್ಲಿ ನೀರೂ ತುಂಬಿತ್ತು. ಅದರ ಬಳಿಗೆ ಯಾರೊಬ್ಬರೂ ಹೋಗುತ್ತಿರಲಿಲ್ಲ. ಮಕ್ಕಳನ್ನಂತೂ ಹಿರಿಯರು ಯಾರೂ ಅಲ್ಲಿಗೆ ಹೋಗಗೊಡುತ್ತಿರಲಿಲ್ಲ. ಕಾರಣ ಆ ಮಡುವಿನಲ್ಲಿ ಕಾಳಿಂಗ ಎಂಬ ಕರಾಳ ಕಪ್ಪು ಸರ್ಪ ಸದಾ ಹೆಡೆ ಎತ್ತಿಕೊಂಡಿರುತ್ತಿತ್ತು. ಒಂದು ದಿನ ಬಾಲಕೃಷ್ಣ ತನ್ನ ಗೆಳೆಯರೊಂದಿಗೆ ಆಟಆಡುತ್ತಾ ಆ ಮಡುವಿನ ಬಳಿ ಬಂದ. “ಕೃಷ್ಣ, ಬೇಡವೋ ಅಲ್ಲಿಗೆ ಹೋಗಬೇಡವೋ. ಮಡುವಿನ ನೀರಿನಲ್ಲಿ ಕಾಳಿಂಗಸರ್ಪ ಇದೆ!” ಅಂದರು ಸಂಗಾತಿಗಳೆಲ್ಲರೂ ಗಾಬರಿಯ ಕಣ್ಣುಬಿಡುತ್ತಾ. “ಹೌದಾ!” ಅನ್ನುತ್ತಾ ಕೃಷ್ಣ ಮಡುವಿನೊಳಗೆ ಧುಮುಕಿಯೇ ಬಿಟ್ಟ. “ಅಯ್ಯೋ! ಕೃಷ್ಣ ಸತ್ತ, ಸತ್ತೇ ಹೋದ!” ಅನ್ನುತ್ತಾ ಎಲ್ಲರೂ ವಿಷಯವನ್ನು ತಿಳಿಸಲು ಬೃಂದಾವನದ ತಮ್ಮ ತಮ್ಮ ಮನೆಗಳಿಗೆ ಬಂದರು. ಇನ್ನು ಅವರೆಲ್ಲರ ಗಾಬರಿ ಕೇಳಬೇಕೇ? ಒಂದೇ ಉಸುರಿಗೆ ನಂದ ಯಶೋದೆಯರೊಂದಿಗೆ ಸ್ಥಳಕ್ಕೆ ಧಾವಿಸಿದರು.

ಮಡುವಿನಲ್ಲಿ ನೋಡಿದರು. ಕೃಷ್ಣ ಕಾಳಿಂಗ ಹೆÀಡೆಯನ್ನು ಎಡಗೈಯಲ್ಲಿ ಬಲವಾಗಿ ಹಿಸುಕಿ ಹಿಡಿದು ಅದರ ದೇಹಭಾಗವನ್ನೂ ಎರಡೂ ಪಾದಗಳಿಂದ ಹಿಸುಕಿ ಹಾಕುತ್ತಿದ್ದಾನೆ. ಅದರ ಬಾಯಿಂದ ರಕ್ತ ಸುರಿದು ಬರುತ್ತಿದೆ. “ಕೃಷ್ಣಾ! ಕೃಷ್ಣಾ!” ಎಂದು ಕೂಗುತ್ತಿದ್ದಂತೆ, ಅದ್ಯಾವುದರ ಕಡೆಗೂ ಗಮನ ಕೊಡದೆ ಕಾಳಿಂಗ ಮರ್ದನ ಮಾಡಿ ಮುಗಿಸಿ ನಗುಮೊಗದಿಂದಲೇ ಧೈರ್ಯವಾಗಿ ಹೊರಬಂದ. ಎಲ್ಲರೂ ಬಾಲಕೃಷ್ಣನ ಸಾಹಸವನ್ನು ಕಂಡು ಬೆರಗಾದರು. ಅವರೆಲ್ಲರಿಗೂ ಈಗ ಹೋದ ಪ್ರಾಣ ಬಂದಂತಾಗಿತ್ತು.

(ಸಂಗ್ರಹ ಕಥೆ)

Spread the love

Related Posts

ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ

ಬಂದಾರು : ಬಂದಾರು ಗ್ರಾಮದ ಪೆರ್ಲ – ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವರ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸಹವದ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಡಾ। ಡಿ. ವೀರೇಂದ್ರ ಹೆಗ್ಗಡೆಯವರು ಇಂದು ಸಂಜೆ 5.30ಕ್ಕೆ ಸರಿಯಾಗಿ ಪೆರ್ಲ ಬೈಪಾಡಿ ಬಸದಿ ಬಳಿ ತಲುಪಲಿದ್ದಾರೆ.…

Spread the love

ಸಿ.ಎಂ ಸಂಧಾನದ ಬಳಿಕ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ ವಾಪಾಸ್

ಬೆಂಗಳೂರು: ಮಾಸಿಕ 15 ಸಾವಿರ ರೂಪಾಯಿ ನಿಶ್ಚಿತ ಗೌರವಧನ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಮುಷ್ಕರ ವಾಪಸ್ಗೆ ನಿರ್ಧರಿಸಲಾಗಿದೆ. ಸತತ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ…

Spread the love

You Missed

ಉಜಿರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

  • By admin
  • January 12, 2025
  • 31 views
ಉಜಿರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

ಪೂಜಾ ರವರ ಚಿಕಿತ್ಸೆಗಾಗಿ ಬೇಕಾಗಿದೆ ಸಹೃದಯಿ ದಾನಿಗಳ ಸಹಕಾರ

  • By admin
  • January 12, 2025
  • 36 views
ಪೂಜಾ ರವರ ಚಿಕಿತ್ಸೆಗಾಗಿ ಬೇಕಾಗಿದೆ ಸಹೃದಯಿ ದಾನಿಗಳ ಸಹಕಾರ

ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ

  • By admin
  • January 11, 2025
  • 39 views
ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ

ಸಿ.ಎಂ ಸಂಧಾನದ ಬಳಿಕ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ ವಾಪಾಸ್

  • By admin
  • January 10, 2025
  • 77 views
ಸಿ.ಎಂ ಸಂಧಾನದ ಬಳಿಕ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ ವಾಪಾಸ್
Let's chat on WhatsApp

How can I help you? :)

19:59