ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್, ಕಲಬುರಗಿಯ ಅಫ್ಷಲ್ ಪುರದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್ ಸೇರಿದಂತೆ ಒಟ್ಟು 47 ಶಿಕ್ಷಕರಿಗೆ 2020ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನು ಘೋಷಿಸಲಾಗಿದೆ.
ಬೆಳ್ತಂಗಡಿ ತಾಲೂಕು ನಡ ಪ್ರೌಢ ಶಾಲೆಯ ಗಣಿತ ಶಿಕ್ಷಕ , ಶಾಲೆಯ ಗಣಿತ ಪ್ರಯೋಗಾಲಯದ ರೂವಾರಿ ಯಾಕೂಬ್‌ರವರನ್ನು ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಘನತೆವೆತ್ತ ರಾಮನಾಥ ಕೋವಿಂದ್ ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯವು ಈ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು ಅದರಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಶಿಕ್ಷಕರು ಪ್ರಶಸ್ತಿ ಪುರಸ್ಕೃತರಾಗಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.
ಈ ಸಚಿವಾಲಯವು ನೇಮಕ ಮಾಡಿದ್ದ ಸ್ವತಂತ್ರ ತೀರ್ಪುಗಾರರ ಸಮಿತಿಯು ಈ ಪಟ್ಟಿಯನ್ನು ಅಂತಿಮಗೊಳಿಸಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 7 ಸಾಂಸ್ಥಿಕ ಆಯ್ಕೆ ಸಮಿತಿ ಅಂತಿಮಗೊಳಿಸಿದ್ದ 153 ಶಿಕ್ಷಕರ ಅರ್ಜಿಯನ್ನು ಪರಿಶೀಲಿಸಿ ಒಟ್ಟು 45 ಶಿಕ್ಷಕರನ್ನು ಈ ಬಾರಿಯ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದೆ.