ಬೆಂಗಳೂರು : ಕೊರೋನಾ ಕರ್ತವ್ಯದಲ್ಲಿ ನಿರತರಾಗಿ ಸೋಂಕಿನಿಂದಾಗಿ ಮೃತಪಟ್ಟರೆ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ 30 ಲಕ್ಷ ವಿಮಾ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಇಂತಹ ಕೊರೋನಾ ವಿಮಾ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಕೊರೋನಾ ಸೋಂಕಿನಿಂದ ಮೃತಪಟ್ಟಂತ ಸರ್ಕಾರಿ ನೌಕರರ ಕುಟುಂಬಸ್ಥರಿಗೆ ಶುಭ ಸುದ್ಧಿ ನೀಡಿದೆ.
ಈ ಕುರಿತಂತೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕೋವಿಡ್-19ರ ರೋಗದಿಂದ ಮೃತಪಟ್ಟ ಸರ್ಕಾರಿ ನೌಕರರ ವಿಮಾ ಪರಿಹಾರ ಮೊತ್ತವನ್ನು ಉಲ್ಲೇಖ(1)ರ ಆದೇಶದ ಕಂಡಿಕೆ 03ರಲ್ಲಿ ತಿಳಿಸಿರುವಂತೆ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ಮಾಡುವಾಗ ಸರ್ಕಾರಿ ನೌಕರರು ಕೋವಿಡ್-19 ರೋಗಕ್ಕೆ ತುತ್ತಾಗಿ ಮೃತರಾದರೇ, ಜಿಲ್ಲಾ ಮಟ್ಟದಲ್ಲಿ ಡಿಸಿ ಮತ್ತು ಟಿಹೆಚ್‌ಓ, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಮತ್ತು ಕೋವಿಡ್ ನೋಡಲ್ ಅಧಿಕಾರಿಯಿಂದ ಪ್ರಮಾಣ ಪತ್ರವನ್ನು ಪಡೆದು, ನಂತ್ರ ಕಂಡಿಕೆ 02 ರಡಿಯಲ್ಲಿ ಸೂಚಿಸಿರುವಂತೆ ಮೃತಪಟ್ಟ ಸರ್ಕಾರಿ ನೌಕರರ ಸಂಬಳವನ್ನು ಯಾವ ಲೆಕ್ಕ ಶೀರ್ಷಿಕೆಯಡಿ ಸೆಳೆಯಲಾಗುತ್ತದೆಯೋ, ಸದರಿ ಲೆಕ್ಕ ಶೀರ್ಷಿಕೆಯ ಕಚೇರಿ ವೆಚ್ಚಗಳಡಿ ಸೆಳೆಯಬೇಕಾಗುತ್ತದೆ ಎಂದು ಆದೇಶಿಸಲಾಗಿದೆ.
ಒಂದು ವೇಳೆ ಆ ಲೆಕ್ಕ ಶೀರ್ಷಿಕೆಯಲ್ಲಿ ಅನುದಾನ ಲಭ್ಯವಿಲ್ಲವೆಂದು ಕಂಡುಬಂದಲ್ಲಿ, ಉಲ್ಲೇಖ (2)ರಲ್ಲಿ ತಿಳಿಸಿರುವಂತೆ ಕೋವಿಡ್-19ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮದಡಿ ನಿಯೋಜನೆಗೊಂಡ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ರೋಗಗ್ರಸ್ತರ ಸಂಪರ್ಕದಿಂದ ಮರಣ ಹೊಂದಿದ್ದಲ್ಲಿ ಅವರ ಕುಟುಂಬಸ್ಥರಿಗೆ ರೂ.30 ಲಕ್ಷಗಳನ್ನು ಪರಿಹಾವನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯಲ್ಲಿ ಲಭ್ಯವಿರುವ ಅನುದಾನದಿಂದ ಭರಿಸುವಂತೆ ಆದೇಶ ಹೊರಡಿಸಲಾಗಿದೆ.
ಅದರಂತೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಮೃತರಾದ ನೌಕರರ ಕುಟುಂಬಕ್ಕೆ 30 ಲಕ್ಷ ವಿಮಾ ಮೊತ್ತವನ್ನು ಉಲ್ಲೇಖ(1) ಅಥವಾ ಉಲ್ಲೇಖ(2)ರ ಆದೇಶದಂತೆ ಮೃತರ ಕುಟುಂಬಕ್ಕೆ ಪಾವತಿಸಲು ಸೂಚಿಸಿದ್ದಾರೆ.