ಲಸಿಕೆ ನೋಂದಣಿ ವೇಳೆ ಡೇಟಾ ಎಂಟ್ರಿ ಪ್ರಮಾಣ ತಪ್ಪಿಸಲು ಕ್ರಮ ಲಸಿಕೆ ಪಡೆಯದಿದ್ದರೂ ನಿಮ್ಮ ಹೆಸರಲ್ಲಿ ಲಸಿಕೆ ಪ್ರಮಾಣಪತ್ರ ಸೃಷ್ಟಿ ಆಗಿದೆಯೇ? ನೋಂದಣಿ ಮಾಡು ವಾಗ ಡೇಟಾ ಎಂಟ್ರಿ ವೇಳೆ ಆಗುತ್ತಿದ್ದ ಈ ಪ್ರಮಾದ ತಪ್ಪಿಸಲು ಕೋವಿನ್ ಪೋರ್ಟಲ್ನಲ್ಲಿ ಶನಿವಾರದಿಂದಲೇ ಹೊಸ ಫೀಚರ್ವೊಂದನ್ನು ಪರಿಚಯಿಸಲಾಗಿದೆ.
ಏನಿದು ಹೊಸ ಫೀಚರ್? :
ಇನ್ನು ಮುಂದೆ ಕೋವಿನ್ ಪೋರ್ಟಲ್ನಲ್ಲಿ ನೀವು ಲಸಿಕೆಗೆ ಹೆಸರು ನೋಂದಣಿ ಮಾಡಿ, ಲಸಿಕೆಗೆ ದಿನಾಂಕ ನಿಗದಿಪಡಿಸಿದರೆ, ಕೂಡಲೇ ನಿಮಗೆ “4 ಅಂಕಿಗಳ ಭದ್ರತ ಕೋಡ್’ವೊಂದನ್ನು ನೀಡಲಾಗುತ್ತದೆ. ಲಸಿಕಾ ಕೇಂದ್ರಕ್ಕೆ ಹೋದಾಗ ಆ ಸೆಕ್ಯುರಿಟಿ ಕೋಡ್ ಅನ್ನು ತೋರಿಸಿದರಷ್ಟೇ ನಿಮಗೆ ಲಸಿಕೆ ನೀಡಲಾಗುತ್ತದೆ.
ಏಕೆ ಈ ಹೊಸ ಕೋಡ್?
ಹಲವು ಮಂದಿ ಕೋವಿನ್ ಪೋರ್ಟಲ್ನಲ್ಲಿ ಲಸಿಕೆಗೆ ನೋಂದಣಿ ಮಾಡಿಕೊಂಡಿರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ನಿಗದಿತ ದಿನಾಂಕದಂದು ಹೋಗಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯ ವಾಗಿರುವುದಿಲ್ಲ. ಆದರೂ, ಅವರ ಮೊಬೈಲ್ಗೆ “ನೀವು ಯಶಸ್ವಿಯಾಗಿ ಲಸಿಕೆ ಹಾಕಿಸಿಕೊಂಡಿದ್ದೀರಿ’ ಎಂಬ ಸಂದೇಶ ಮತ್ತು ಲಸಿಕೆ ಪ್ರಮಾಣಪತ್ರ ಬರುತ್ತದೆ. ಈ ಬಗ್ಗೆ ಅನೇಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಹೊಸ ಭದ್ರತ ಫೀಚರ್ ಅನ್ನು ಪರಿಚಯಿಸಲಾಗಿದೆ.
ಬೇರೆಡೆ ಇಂಥ ಫೀಚರ್ ಬಳಕೆಯಾಗುತ್ತಿದೆಯೇ? : ಪ್ರಯಾಣಿಕರು ಓಲಾ ಕ್ಯಾಬ್ ಬುಕ್ ಮಾಡಿದೊಡನೆ ಅವರಿಗೆ 4 ಅಂಕಿಗಳ ಪಾಸ್ವರ್ಡ್ ಕಳುಹಿಸಲಾಗುತ್ತದೆ. ಈ ಪಾಸ್ವರ್ಡ್ ಕ್ಯಾಬ್ ಚಾಲಕನಿಗೆ ಗೊತ್ತಿರುವುದಿಲ್ಲ. ನೀವು ಕ್ಯಾಬ್ ಅಥವಾ ಕಾರು ಹತ್ತಿದ ಬಳಿಕ ಆ ಪಾಸ್ವರ್ಡ್ ಅನ್ನು ನೀವು ಚಾಲಕನಿಗೆ ನೀಡುತ್ತೀರಿ. ಇದೇ ರೀತಿ, ಕೆಲವು ಅಧಿಕ ಮೌಲ್ಯದ ಸರಕುಗಳ ರವಾನೆ ವೇಳೆ ಇ-ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ ಒನ್ ಟೈಂ ಪಿನ್ ನೀಡುತ್ತವೆೆ. ಸರಕು ಸರಿಯಾದ ವ್ಯಕ್ತಿಗೇ ತಲುಪಿದೆ ಎನ್ನುವುದನ್ನು ಖಾತ್ರಿಪಡಿಸುವುದು ಇದರ ಉದ್ದೇಶ. ಇದೇ ಮಾದರಿಯಲ್ಲಿ ಕೋವಿನ್ ಪೋರ್ಟಲ್ನ 4 ಅಂಕಿಗಳ ಸೆಕ್ಯುರಿಟಿ ಕೋಡ್ ಕೂಡ ಕೆಲಸ ಮಾಡುತ್ತದೆ.