ಡಾಕಾ: ವರ್ಷಕಳೆದಂತೆ ವಿಶ್ವದಲ್ಲಿ ಗುಡುಗು- ಮಿಂಚಿನಿಂದ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬಾಂಗ್ಲಾದೇಶದಲ್ಲಿ ಈ ಬಾರಿ ಗುಡುಗು- ಮಿಂಚಿನ ಆರ್ಭಟ ಜೋರಾಗಿದೆ. ಸದ್ಯ ಕ್ರಿಕೆಟ್ ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಬೇಕು ಎಂದು ಅಂದುಕೊಂಡಿದ್ದ ಇಬ್ಬರು ಯುವ ಕ್ರಿಕೆಟಿಗರು ಮೈದಾನದಲ್ಲೇ ಮಿಂಚಿನಿಂದ ಸಾವನ್ನಪ್ಪಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಮೊಹಮ್ಮದ್ ನದೀಮ್ ಹಾಗೂ ಮಿಜನುರ್ ರೆಹಮಾನ್ ಮೃತ ಯುವ ಕ್ರಿಕೆಟಿಗರು ಆಗಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಡಾಕಾ ಹೊರವಲಯದ ಗಾಜಾ ಮೈದಾನದಲ್ಲಿ ಪುಟ್ಬಾಲ್ ಆಡುತ್ತಿದ್ದಾಗ ಇಬ್ಬರು ಕ್ರಿಕೆಟಿಗರಿಗೆ ಸಿಡಿಲು ಬಡಿದಿದೆ.
ಸಿಡಿಲು ಬಡಿದ ತಕ್ಷಣ ಸಹ ಆಟಗಾರರು, ಅವರನ್ನ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟೊತ್ತಿಗಾಗಲೇ ಯುವ ಕ್ರಿಕೆಟಿಗರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಬಾಂಗ್ಲಾದೇಶದಲ್ಲಿ ಪ್ರತಿ ವರ್ಷ ಸಿಡಿಲಿಗೆ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಏಪ್ರಿಲ್ ಮತ್ತು ಅಕ್ಟೋಬರ್ನಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷ 350 ಜನರು ಸಿಡಿಲಿಗೆ ಬಲಿಯಾಗಿದ್ದಾರೆ.