ಶಬರಿಮಲೆ: ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಗಳವಾರ ಪ್ರಚಾರದ ಮಧ್ಯೆ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಗೆ ಮಾಲಧಾರಿಯಾಗಿ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಕೊಂಡರು.
ಸಂಜೆ 5.50ಕ್ಕೆ ಸರಿಯಾಗಿ ಪಂಪಾ ನದಿಯಿಂದ ಬೆಟ್ಟಕ್ಕೆ ಇರುಮುಡಿಯನ್ನು ಹೊತ್ತು ಕಾಲ್ನಡಿಗೆಯಲ್ಲಿ ಹೊರಟ ಡಿಸಿಎಂ ಅವರು, 6.55 ಗಂಟೆಗೆ ಸನ್ನಿಧಾನ ಸೇರಿಕೊಂಡರು. ಅದೇ ವೇಳೆಯಲ್ಲಿ ಸನ್ನಿಧಾನದಲ್ಲಿ ನಡೆಯುವ ವಿಶಿಷ್ಟ್ಯ ಸಾಂಪ್ರದಾಯಿಕ ಪಡಿಪೂಜೆಯಲ್ಲಿ ಭಾಗಿಯಾದ ಅವರು ತದ ನಂತರ ಸ್ವಾಮಿಯ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ದೇಗುಲದ ಮುಖ್ಯ ತಂತ್ರಿ ರಾಜೀವ ಕಂದರಾರು ಹಾಗೂ ಮೇಲ್‌ಶಾಂತಿ ಅವರಾದ ವಿ.ಕೆ.ಜಯರಾಜ್ ಪೋಟ್ರಿ ಅವರು ಡಿಸಿಎಂ ಅವರಿಗಾಗಿ ಪೂಜೆ ನೆರವೇರಿಸಿಕೊಟ್ಟು ಪವಿತ್ರವಾದ ಎಲೆ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಡಿಸಿಎಂ ಅವರು ಸ್ವಾಮಿಯ ಸನ್ನಿಧಾನದ ಸ್ವರ್ಣ ಮೆಟ್ಟಿಲು ಮುಂದೆ ನಿಂತು ಇರುಮುಡಿ ಸಮರ್ಪಿಸಿದರು. ಇದೇ ವೇಳೆ ದೇವಳದ ಅರ್ಚಕರು, ಮುಖ್ಯ ತಂತ್ರಿ ರಾಜೀವ ಕಂದರಾರು ಉಪ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ಗೌರವಿಸಿದರಲ್ಲದೆ, ಕ್ಷೇತ್ರದ ಮಹಿಮೆಯ ಬಗ್ಗೆ ಮಾಹಿತಿ ನೀಡಿದರು.
ಪಂದಳಮ್ ಅರಮನೆಗೂ ಭೇಟಿ:
ಇಂದು ಬೆಳಗ್ಗೆಯೇ ಕೇರಳದ ಪಟ್ಟಾನಂತಿಟ್ಟ ನಗರಕ್ಕೆ ಬಂದ ಅವರು, ಅಲ್ಲಿಂದ ನೇರವಾಗಿ ಶಬರಿಮಲೆಗೆ ತರಳುವ ಮಾರ್ಗಮಧ್ಯೆ ಪಂದಳಮ್ ಅರಮನೆಗೆ ಭೇಟಿ ನೀಡಿದರು. ಅಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಅವರ ಸಾಕುತಂದೆ ಮಹಾರಾಜ ಶ್ರೀ ರಾಜಶೇಖರ ಪೆರುಮಾಳ್ ಅವರ ವಂಶಸ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ರಾಜ ಕುಟುಂಬದ 102 ವರ್ಷದ ಹಿರಿಯ ಅಜ್ಜಿ ಮಾಕಮ್ಮನಾಳ್ ತನ್ವಾಂಗಿ ತಂಪುರುಟ್ಟೈ ಅವರಿಂದ ಆಶೀರ್ವಾದ ಪಡೆದರು ಡಿಸಿಎಂ. ಬಳಿಕ ಮಕರವಿಳಕ್ಕು ಸಮಯದಲ್ಲಿ ಸ್ವಾಮಿ ಅಯ್ಯಪ್ಪಗೆ ಅಲಂಕಾರ ಮಾಡುವ ತಿರುವಾಭರಣಗಳ ಸ್ಟ್ರಾಂಗ್ ರೂಮ್ ಕೂಡ ಇದೇ ಅರಮನೆಯಲ್ಲಿದ್ದು, ಡಿಸಿಎಂ ಅವರು ಅಲ್ಲಿಗೂ ಭೇಟಿ ನೀಡಿ ನಮಸ್ಕರಿಸಿದರು. ರಾಜ ವಂಶಕ್ಕೆ ಸೇರಿದ 400 ಜನರು ಇಲ್ಲಿದ್ದು, ಕುಟುಂಬಸ್ಥರ ಜತೆ ಡಿಸಿಎಂ ಅವರು ಅನೌಪಚಾರಿಕ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು; “ನನ್ನ ಜೀವನದಲ್ಲಿಯೇ ಇದೊಂದು ಅವಿಸ್ಮರಣೀಯ ದಿನ. ಸ್ವಾಮಿ ಅಯ್ಯಪ್ಪ ಅವರು ಆಡಿಬೆಳೆದ ಜಾಗವನ್ನು ಸಂದರ್ಶಿಸುವ ಭಾಗ್ಯ ನನ್ನದಾಗಿದೆ’ ಎಂದರು.