ಲಖನೌ: ನದಿಗಳಲ್ಲಿ ಶವಗಳ ಅಂತ್ಯಸಂಸ್ಕಾರ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನದಿಗಳ ದಡದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ದಳ (ಎಸ್‌ಡಿಆರ್‌ಎಫ್) ಹಾಗೂ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಗೆ (ಪಿಎಸಿ) ಗಸ್ತು ತಿರುಗಲು ಶುಕ್ರವಾರ ಆದೇಶ ನೀಡಿದ್ದಾರೆ.
ಇತ್ತೀಚೆಗೆ ಗಂಗಾ ನದಿಯಲ್ಲಿ ಸಾಲುಸಾಲು ಹೆಣಗಳು ತೇಲಿಕೊಂಡು ಬಂದ ಬೆನ್ನಲ್ಲೇ ಆದಿತ್ಯನಾಥ್ ಈ ರೀತಿ ಆದೇಶ ಹೊರಡಿಸಿದ್ದಾರೆ. ನದಿಯಲ್ಲಿ ಅಂತ್ಯಸಂಸ್ಕಾರ ನಡೆಸಿದ ಶವಗಳು ಕೋವಿಡ್–19 ರೋಗಿಗಳಾಗಿದ್ದಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದ್ದವು.
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಯು (ಪಿಎಸಿ) ನದಿಗಳ ಸುತ್ತಮುತ್ತ ಗಸ್ತು ತಿರುಗಬೇಕು ಮತ್ತು ನದಿಗಳಲ್ಲಿ ಯಾವುದೇ ಶವಗಳನ್ನು ವಿಲೇವಾರಿ ಮಾಡದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮದ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಸಾವಿಗೀಡಾದವರೆಲ್ಲರೂ ಗೌರವಯುತ ಅಂತ್ಯಸಂಸ್ಕಾರಕ್ಕೆ ಅರ್ಹರು. ಅಂತಿಮ ವಿಧಿವಿಧಾನ ನೆರವೇರಿಸಲು ಈಗಾಗಲೇ ರಾಜ್ಯ ಸರ್ಕಾರವು ಹಣವನ್ನು ಮಂಜೂರು ಮಾಡಿದೆ’ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.