ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಸಾರಿಗೆ ಬಸ್ ಡಿಪೋದಲ್ಲಿನ ಬಂಕ್ನಿಂದಲೇ ಶುಕ್ರವಾರ ಡೀಸೆಲ್ ಹಾಕಿಸಿಕೊಂಡಿದ್ದು, ಡೀಸೆಲ್ ತುಂಬಿದ ಸಿಬ್ಬಂದಿಗೀಗ ಸಂಕಷ್ಟ ಎದುರಾಗಿದೆ.
ನಗರದ ಮೂರನೇ ಬಸ್ ಡಿಪೋದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಿದ್ದ ವಿಶ್ರಾಂತಿ ಗೃಹ ಉದ್ಘಾಟನೆಗೆಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಸ್ವಂತ ಕಾರಿನಲ್ಲಿ ಬಂದಿದ್ದರು. ಇದೇ ವೇಳೆ ಸವದಿ ಅವರ ಕಾರಿಗೆ ಇಲ್ಲಿನ ಸರ್ಕಾರಿ ಬಂಕ್ನಲ್ಲಿ ಬರೋಬ್ಬರಿ 44 ಲೀಟರ್ ಡೀಸೆಲ್ ಅನ್ನು ತುಂಬಿಸಿಕೊಂಡರು. ಗ್ರಾಮೀಣ ಹಾಗೂ ನಗರದಲ್ಲಿ ಸಂಚರಿಸುವ ಸರ್ಕಾರಿ ಬಸ್ ಗಳಿಗೆ ಮಾತ್ರ ಡೀಸೆಲ್ ಹಾಕಲು ಈ ಡಿಪೋ ಬಂಕ್ನಲ್ಲಿ ಅವಕಾಶ ಇದೆ. ಆದರೂ ಸಚಿವರ ಖಾಸಗಿ ಕಾರಿಗೆ ಸರ್ಕಾರಿ ಡಿಪೋದಲ್ಲಿ ಡೀಸೆಲ್ ಹಾಕಿದ್ದು, ಚರ್ಚೆಗೆ ಗ್ರಾಸವಾಗಿತ್ತು.
ಡಿಸಿಎಂ ಲಕ್ಷ್ಮಣ ಸವದಿ ಅವರ ಖಾಸಗಿ ವಾಹನಕ್ಕೆ ಸಂಸ್ಥೆಯ ನಿಯಮ ಉಲ್ಲಂಘಿಸಿ 44 ಲೀಟರ್ ಡೀಸೆಲ್ ಹಾಕಿದ್ದನ್ನು ಪ್ರಶ್ನಿಸಿ ವಾ.ಕ.ರ.ಸಾ.ಸಂಸ್ಥೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರು ಶನಿವಾರ ನೋಟಿಸ್ ಜಾರಿ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿ ಇಂಧನ ಹಾಕಿದ್ದಕ್ಕೆ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು? ಎಂದು ಬೆಳಗಾವಿ 3ನೇ ಘಟಕದ ಕಿರಿಯ ಸಹಾಯಕ ಬಿ.ಎಸ್. ಕಿಶೋರ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು 7 ದಿನಗಳ ಒಳಗಾಗಿ ಉತ್ತರಿಸುವಂತೆ ನೋಟಿಸ್ನಲ್ಲಿ ಗಡುವು ನೀಡಿದ್ದಾರೆ.