ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಮುಳಿಕ್ಕಾರಿನ ಕೃಷ್ಣಪ್ಪ ಅವರ ಮನೆಯ ಮೇಲೆ ಬೃಹತ್ ಮರವೊಂದು ಬಿದ್ದಿದ್ದು ಶೌರ್ಯ ವಿಪತ್ತು ನಿರ್ವಹಣಾ ಘಟಕ ಧರ್ಮಸ್ಥಳದ ಧರ್ಮಸ್ಥಳ ವಲಯದ ಸ್ವಯಂಸೇವಕರು ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದರು.
ಸಂಜೆ ಆರು ಗಂಟೆ ಸುಮಾರಿಗೆ ಧರಾಶಾಯಿಯಾದ ಬೃಹತ್ ನಂದಿ ಜಾತಿಯ ಮರ ಕೃಷ್ಣಪ್ಪರವರ ಇದ್ದೊಂದು ಸೂರಿನ ಮೇಲೆಯೇ ಬಿದ್ದು ಅಪಾರ ಹಾನಿ ಮಾಡಿತ್ತು. ಒಂದೆಡೆ ಧಾರಾಕಾರ ಮಳೆ, ಅಳುತ್ತಿರುವ ಕುಟುಂಬ, ಆಗೊಮ್ಮೆ ಈಗೊಮ್ಮೆ ಲಟ್ಟೆನ್ನುವ ಬಿದಿರಿನ ಛಾವಣಿ, ಮಣ್ಣಿನ ಗೋಡೆ ಎಲ್ಲಿ ಕುಸಿಯುವುದೋ ಎಂಬ ಭಯ, ಸುತ್ತಲೂ ಆವರಿಸಿದ ಕತ್ತಲಿನಲ್ಲಿ ವಾರ್ಡ್ ಪಂಚಾಯತ್ ಸದಸ್ಯರಾದ ಹರ್ಷಿತ್ ಜೈನ್ ಇವರಿಗೆ ಫೋನಾಯಿಸಿದರು.
ತಕ್ಷಣಕ್ಕೆ ಏನು ಮಾಡಬೇಕೆಂದು ತೋಚದ ಹರ್ಷಿತ್ ಜೈನ್ ಕೂಡಲೆ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಸಂಯೋಜಕ ಸ್ವಸ್ತಿಕ್ ಕನ್ಯಾಡಿ ಅವರಿಗೆ ಕರೆ ಮಾಡಿ ತಿಳಿಸಿದರು.
ತಕ್ಷಣ ಜಾಗೃತಿಗೊಂಡ ಸ್ವಸ್ತಿಕ್ ಧರ್ಮಸ್ಥಳ ವಲಯ ಹಾಗೂ ಬೆಳ್ತಂಗಡಿ ಘಟಕದ ಸದಸ್ಯರ ಬಳಗದಲ್ಲಿ ಸಂದೇಶ ಹರಿಯಬಿಟ್ಟು ಸ್ವಯಂಸೇವಕ ವಿದ್ವತ್ ಅವರ ಜೊತೆ ಸ್ಥಳಕ್ಕೆ ಧಾವಿಸಿದರು.
ಮುಳಿಕ್ಕಾರು ಭಾಗದ ಸ್ವಯಂಸೇವಕ ವಿಘ್ನೇಶ್ ಅವರೂ ಕರೆ ಮಾಡಿ ಸ್ಥಳಕ್ಕೆ ಹೊರಟು ಮನೆಯವರಿಗೆ ಧೈರ್ಯ ತುಂಬಲಾಯಿತು.
ಮನೆಯವರಿಂದಲೇ ಕತ್ತಿ ಪಡೆದು ಸಾಧ್ಯವಾದಷ್ಟು ತೆರವುಗೊಳಿಸುವ ಪ್ರಯತ್ನ ಮಾಡಲಾಯಿತು. ಬೃಹತ್ ಮರವಾದ್ದರಿಂದ ಮರುದಿವಸಕ್ಕೆ ಮುಂದೂಡಲಾಯಿತು.
ಮರುದಿವಸ ಅಂದರೆ ಜೂನ್ 13ನೇ ತಾರೀಖು ಮುಂಜಾನೆ 9ಗಂಟೆಯಿಂದ ಕಾರ್ಯಾಚರಣೆ ಶುರುಮಾಡಿ 11ಗಂಟೆಯ ವೇಳೆಗೆ ಮನೆಯ ಮೇಲಿದ್ದ ಮರದ ತುಂಡುಗಳನ್ನು ತೆರವುಗೊಳಿಸುವಲ್ಲಿ ತಂಡ ಯಶಸ್ವಿಯಾಯಿತು. ಈ ವೇಳೆ ಸ್ಥಳೀಯರು ಕೈ ಜೋಡಿಸಿದರು.
ಧರ್ಮಸ್ಥಳ ಪಂಚಾಯತ್ ಗೆ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದ್ದು ಈಗಾಗಲೇ ಹೊಸ ಮನೆ ಕಟ್ಟುತ್ತಿದ್ದು ಅದನ್ನು ಪೂರ್ತಿಗೊಳಿಸಿಕೊಡುವ ಭರವಸೆ ನೀಡಿದ್ದಾರೆ. ಪಂಚಾಯತ್ನಿಂದ ಸೌಲಭ್ಯ ದೊರೆಯದೇ ಹೋದರೆ ವಿಪತ್ತು ನಿರ್ವಹಣಾ ತಂಡದಿಂದ ಹಾನಿಗೊಳಗಾದ ಛಾವಣಿಯನ್ನು ನಿರ್ಮಿಸಿಕೊಡುವ ಭರವಸೆ ನೀಡಲಾಗಿದೆ.
ಸಂತ್ರಸ್ತರಿಗೆ ಮನೆಯಲ್ಲೇ ಜಾಗ ಕೊಟ್ಟ ಸ್ವಯಂಸೇವಕ
ಸದ್ಯಕ್ಕೆ ಮನೆಯವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲವೆಂದು ತೋಡಿಕೊಂಡಾಗ ಧರ್ಮಸ್ಥಳ ವಲಯದ ಸ್ವಯಂಸೇವಕ ವಿಘ್ನೇಶ್ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿರುತ್ತಾರೆ.
ಕರೆ ಮಾಡಿ ಭರವಸೆ ಕೊಟ್ಟ ಸಂಯೋಜಕರು
ಧರ್ಮಸ್ಥಳ ವಲಯದ ಬಹುತೇಕ ಸದಸ್ಯರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಕರ್ತವ್ಯದಲ್ಲಿರುವುದರಿಂದ ಸ್ವಯಂಸೇವಕರ ಅಗತ್ಯತೆ ಬಗ್ಗೆ ಬೆಳ್ತಂಗಡಿ ಘಟಕದಲ್ಲಿ ವಿನಂತಿಸಿಕೊಂಡಾಗ ನಡ-ಕನ್ಯಾಡಿ ಘಟಕದ ಸಂಯೋಜಕರಾದ ವಸಂತಿಯವರು ಕರೆ ಮಾಡಿ ವಿಚಾರಿಸಿದ್ದರು. ಕೊಕ್ಕಡ ವಲಯದ ಸಂಯೋಜಕರಾದ ಗಿರಿಜಾರವರು ಎರಡೂ ದಿನವೂ ಕರೆ ಮಾಡಿ ಸ್ವಯಂಸೇವಕರನ್ನು ಕಳುಹಿಸುವ ಬಗ್ಗೆ ಉತ್ಸುಕತೆ ತೋರಿದ್ದರು.
ಕಾರ್ಯಾಚರಣೆಯಲ್ಲಿ ಧರ್ಮಸ್ಥಳ ವಲಯದ ಸಂಯೋಜಕ ಸ್ವಸ್ತಿಕ್ ಕನ್ಯಾಡಿ, ಸ್ವಯಂಸೇವಕರಾದ ವಿದ್ವತ್ ಧರ್ಮಸ್ಥಳ, ವಿಘ್ನೇಶ್ ಧರ್ಮಸ್ಥಳ, ಗ್ರಾ.ಪಂ ಸದಸ್ಯ ಹರ್ಷಿತ್ ಜೈನ್ ಹಾಗೂ ಸ್ಥಳೀಯರು ಸಹಕರಿಸಿದರು.