ಬರುಚ್: ಶನಿವಾರ ನಸುಕಿನ ಜಾವದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಸುಮಾರು 12 ಮಂದಿ ಕರೊನಾ ರೋಗಿಗಳು ಮೃತಪಟ್ಟಿರುವ ಘಟನೆ ಗುಜರಾತ್ನ ಬರುಚ್ನಲ್ಲಿರುವ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಸುಮಾರು 50 ಇತರೆ ರೋಗಿಗಳು ವೆಲ್ಫೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಲ್ಲರನ್ನು ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರ.
ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಮತ್ತು ಹೊಗೆಯಿಂದಾಗಿ ಉಸಿರಾಡಲು ಆಗದೇ 12 ಕರೊನಾ ರೋಗಿಗಳು ಸಾವಿಗೀಡಾಗಿದ್ದಾರೆ ಎಂದು ಬರುಚ್ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಸಿನ್ಹ್ ಚುದಾಸಮಾ ಹೇಳಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ಚುದಾಸಮಾ ವ್ಯಕ್ತಪಡಿಸಿದ್ದಾರೆ.
ಬರುಚ್-ಜಂಬುಸರ್ ಹೆದ್ದಾರಿ ಬಳಿಯಿದ್ದ ನಾಲ್ಕು ಅಂತಸ್ತಿನ ಕಟ್ಟಡವನ್ನು ಕೋವಿಡ್ 19 ಆಸ್ಪತ್ರೆಯಾಗಿ ಮಾಡಲಾಗಿತ್ತು, ಇದನ್ನು ಟ್ರಸ್ಟ್ ಒಂದು ನಡೆಸುತ್ತಿತ್ತು.
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನೆಲಮಹಡಿಯಲ್ಲಿರುವ ಕೋವಿಡ್ ವಾರ್ಡ್ನಲ್ಲಿ ಬೆಂಕಿ ಹೊತ್ತಿಕೊಂಡಿತು ಎಂದು ಅಗ್ನಿಶಾಮಕ ಅಧಿಕಾರಿ ಶೈಲೇಶ್ ಸಾನ್ಸಿಯಾ ಹೇಳಿದ್ದಾರೆ.
ಒಂದು ಗಂಟೆಯೊಳಗೆ ಬೆಂಕಿಯನ್ನು ತಹಬದಿಗೆ ತಂದು 50 ರೋಗಿಗಳನ್ನು ರಕ್ಷಣೆ ಮಾಡಲಾಯಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.