ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಮೆಂಟ್ ಸಾಗಾಟದ ಲಾರಿಯಲ್ಲಿ ಹಿಂಬಂದಿ ಟಯರ್ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಲಾರಿ ಭಾಗಶಃ ಸುಟ್ಟು ಹೋಗಿರುವ ಘಟನೆ ಗುಂಡ್ಯ ಸಮೀಪ ಶಿರಾಡಿ ಗ್ರಾಮದ ಬಡ್ಕಿನಹಳ್ಳ ಎಂಬಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಗೆ ಸೇರಿರುವ ಈ ಲಾರಿ ಮಂಗಳೂರು ಕಡೆಗೆ ಸಿಮೆಂಟ್ ಸಾಗಿಸುತ್ತಿದ್ದ ವೇಳೆ ಈ ಬೆಂಕಿ ಅವಘಡ ಸಂಭವಿಸಿದೆ. ಲಾರಿಯ ಹಿಂಬಂದಿಗೆ ಬೆಂಕಿ ತಗುಲಿರುವುದನ್ನು ಗಮನಿಸಿದ ಲಾರಿ ಚಾಲಕ ಕೂಡಲೇ ಲಾರಿಯನ್ನು ನಿಲ್ಲಿಸುವ ಮೂಲಕ ಮುಂದೆ ಘಟಿಸಬಹುದಿದ್ದ ಅನಾಹುತವನ್ನು ತಪ್ಪಿಸಿದ್ದಾನೆ.
ಹಿಂಬಂದಿಯ ಟಯರ್ ಮತ್ತು ಅದರ ಸುತ್ತಲಿನ ಭಾಗ ಬೆಂಕಿಗೆ ಸಂಪೂರ್ಣ ಸುಟ್ಟು ಕಾರಕಲಾಗಿದ್ದು, ಲಾರಿಯ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಪೊಲೀಸರು ಆಗಮಿಸಿದ್ದು, ಕೂಡಲೇ ಸ್ಥಳೀಯರ ಮತ್ತು ಪುತ್ತೂರು ವಿಭಾಗದ ಅಗ್ನಿ ಶಾಮಕ ದಳದವರ ನೆರವಿನಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ