ಬೆಂಗಳೂರು: ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.
ಸಚಿವರ ರಾಜಿನಾಮೆ ಬೆನ್ನಲ್ಲೇ ಜಾರಕಿಹೊಳಿ ಬೆಂಬಲಿಗರಿಂದ ಗೋಕಾಕ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಗೋಕಾಕ್ ನಲ್ಲಿ ಬೆಂಬಲಿಗರಿಂದ ಹೈಡ್ರಾಮ ಮುಂದುವರಿದು ಸೀಮೆ ಎಣ್ಣೆ ಸುರಿದು ಕೊಂಡು ಬೆಂಬಲಿಗನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.
ಸಿಡಿ ಬಹಿರಂಗದ ಹಿನ್ನೆಲೆ ಇಂದು ರಾಜೀನಾಮೆ ಪತ್ರವನ್ನು ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಕೆ ಮಾಡಿದ್ದು, ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಾಗಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಇಂದು ಬೆಳಗ್ಗೆಯಿಂದಲೂ ಸಿಡಿ ವಿಚಾರವಾಗಿ ಹೈಕಮಾಂಡ್ ಮಟ್ಟದಲ್ಲಿ ಸಭೆ ನಡೆದ ನಂತರ ರಾಜೀನಾಮೆ ಸಲ್ಲಿಸಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಮೂಲಕ ಆರೋಪ ನಿರಾಧಾರ ಎಂದು ಸಾಬೀತಾದ ನಂತರ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.