ಮಂಗಳೂರು : ಮಂಗಳೂರು ಸಮೀಪದ ಗುರುಪುರದ ಕುಕ್ಕುದಕಟ್ಟೆಯ ನಿವಾಸಿ ಕೃಷ್ಣ ಪೂಜಾರಿಯ ಮನೆಯಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಅನಾಹುತದಿಂದ ಲಕ್ಷಾಂತರ ರೂ ಮೌಲ್ಯದ ಬಟ್ಟೆಬರೆ, ನಗದು, ಕಪಾಟು, ಮೇಲ್ಛಾವಣಿ ಹಾಗೂ ಹೆಂಚು ಸುಟ್ಟು ಭಸ್ಮವಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕೃಷ್ಣ ಪೂಜಾರಿ ಮತ್ತವರ ಪತ್ನಿ ಹಾಗೂ ಮಗಳು ಎಂದಿನಂತೆ ಕೆಲಸಕ್ಕೆ ಹೊರಗಡೆ ಹೋಗಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಗೆ ಮನೆಯಲ್ಲಿ ಹೊಗೆ ಕಾಣಿಸಿದೆ. ಅದನ್ನು ಕಂಡ ನೆರೆಮನೆಯ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿದರು. ಅದರಂತೆ ಯುವಕರು ಬೆಂಕಿ ನಂದಿಸಿದರೂ ಕೂಡ ಭಾರೀ ನಷ್ಟವಾಗಿದೆ. ಕೃಷ್ಣ ಪೂಜಾರಿಯ ಪುತ್ರಿ ಕಪಾಟಿನಲ್ಲಿಟ್ಟಿದ್ದ 30,000 ರೂ., ಟೀವಿ, ಬಟ್ಟೆಬರೆ, ವಿದ್ಯುತ್ ಉಪಕರಣ ಮತ್ತಿತರ ಸೊತ್ತುಗಳು ಸುಟ್ಟು ಹೋಗಿವೆ.
ಸ್ಥಳಕ್ಕೆ ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ್ ಶೆಟ್ಟಿ, ಪಿಡಿಒ ಅಬೂಬಕರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.