ಮೈಸೂರು : ಏಪ್ರಿಲ್ 11 ರಂದು ನಡೆಯ ಬೇಕಿದ್ದಂತ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಮುಂದೂಡಲಾಗಿತ್ತು. ಇಂತಹ ಪರೀಕ್ಷೆಯನ್ನು ದಿನಾಂಕ 25-04-2021ರಂದು ನಡೆಸಲಾಗುತ್ತದೆ ಎಂಬುದಾಗಿ ಮೈಸೂರು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಎಸ್‌ಇಟಿ)ಯನ್ನು ದಿನಾಂಕ 11-04-2021ರಂದು ನಡೆಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದ್ರೇ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದ್ದರಿಂದ ಸದರಿ ಕೆ ಸೆಟ್ 2021 ಪರೀಕ್ಷೆಯನ್ನು ದಿನಾಂಕ 25-04-2021(ಭಾನುವಾರ)ರಂದು ನಡೆಸಲು ತೀರ್ಮಾನಿಸಲಾಗಿರುತ್ತದೆ.
ಕೆಸೆಟ್ 2021ರ ಪರೀಕ್ಷೆಯನ್ನು ನಡೆಸಲು ಪತ್ರದ ಮುಖಾಂತರ ಈಗಾಗಲೇ ಕರ್ನಾಟಕ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುತ್ತಾ, ಸದರಿ ಪರೀಕ್ಷೆಯನ್ನು ಯಶಸ್ವಿಗೊಳಿಸಲು ಕೋರಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.