ಕಡಿರುದ್ಯಾವರ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಡಿರುದ್ಯಾವರ ಗ್ರಾ.ಪಂ.ಗೆ 48 ಲಕ್ಷ ರೂ ಅನುದಾನದಲ್ಲಿ ಎಪ್ರಿಲ್ 2021ರಲ್ಲಿ ಶಿಲಾನ್ಯಾಸಗೊಂಡ ನೂತನ ಗ್ರಾಮ ಚಾವಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಇದೀಗ ಫೆ. 4ರಂದು ಉದ್ಘಾಟನೆಗೆ ಸಜ್ಜಾಗಿದೆ.ಮಿತ್ತಬಾಗಿಲು ಗ್ರಾ.ಪಂ.ಗೆ ಒಳಪಟ್ಟಿದ್ದ ಕಡಿರುದ್ಯಾವರ ಗ್ರಾ.ಪಂ.ಗೆ 2018-19ನೇ ಸಾಲಿನ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಯೋಜನೆಯಲ್ಲಿ 20 ಲಕ್ಷ ರೂ. ಹಾಗೂ ಎಂಎನ್‌ಆರ್‌ಜಿ 28 ಲಕ್ಷ ರೂ. ಸೇರಿ 48 ಲಕ್ಷ ರೂ. ಅನುದಾನದಡಿ ಹಳೆ ಗ್ರಾ.ಪಂ. ಸನಿಹದ 1.37 ಎಕ್ಕರೆ ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಾಣವಾಗಿದೆ.
ಫೆ.4ರಂದು ಪಂಚಾಯತ್ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಯವರು (ರಾಜ್ಯಸಭಾ ಸದಸ್ಯರು) ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್, ಉಡುಪಿ ಜಿಲ್ಲಾ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರಾದ ಕೆ.ಪ್ರತಾಪಸಿಂಹ ನಾಯಕ್, ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಹರಿಕೃಷ್ಣ ಬಂಟ್ವಾಳ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಜಿಲ್ಲಾ ಉಪಕಾರ್ಯದರ್ಶಿ ಕೆ.ಆನಂದ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ತಾಲೂಕಿನ ತಹಶೀಲ್ದಾರ್ ಹಾಗೂ ಕಾರ್ಯಪಾಲಕ ಅಭಿಯಂತರರು ನಿತಿನ್ ಕುಮಾರ್ ನಾಯಕ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ ಗ್ರಾಮ ಪಂಚಾಯತ್ ಗಳು, ಸ್ವತಂತ್ರವಾಗಿ ಅಭಿವೃದ್ಧಿಯತ್ತ ಮುನ್ನಡೆ ಸಾಗುತ್ತಿರುವುದು ಗ್ರಾಮದ ಅಭಿವೃದ್ಧಿಯ ಸೂಚನೆಯಾಗಿದೆ. ಇತ್ತೀಚೆಗೆ ಹೊಸ ಗ್ರಾಮ ಪಂಚಾಯತ್‌ಗಳು ರಚನೆ ಆದಾಗ ಕುಗ್ರಾಮ ಎಂದೇ ಗುರುತಿಸಲ್ಪಟ್ಟ ದಿಡುಪೆಯ ರಸ್ತೆಯ ಪಕ್ಕದಲ್ಲಿ ಎದ್ದು ನಿಂತು ಬಹಳ ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ಪುಟ್ಟ ಗ್ರಾಮ ಕಡಿರುದ್ಯಾವರ.
ಸುಮಾರು 48ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲಿ ವಿಶಾಲವಾದ ಸಭಾಭವನ ಗ್ರಾಮದ ಸಣ್ಣ ಮಟ್ಟದ ಸಭೆ ಸಮಾರಂಭಕ್ಕೆ ಉಪಯೋಗಿಸಬಹುದು. ಮೀಟಿಂಗ್ ಹಾಲ್, ಅಧ್ಯಕ್ಷ, ಉಪಾಧ್ಯಕ್ಷರ ಪ್ರತ್ಯೇಕ ಕಛೇರಿಗಳು. ಅಭಿವೃದ್ಧಿ ಅಧಿಕಾರಿ ಕಛೇರಿ, ಕಂಪ್ಯೂಟರ್ ರೂಮ್‌ಗಳು ಹಾಗೂ ಸಿಬ್ಬಂದಿಗಳ ಕ್ಯಾಬಿನ್ ಗಳು ನಿರ್ಮಾಣಗೊಂಡಿದೆ.
ವಿಶೇಷತೆ: ಹೊರಾಂಗಣದಲ್ಲಿ ಗಾರ್ಡನ್, ಹಣ್ಣಿನ ತೋಟ, ಹೂವಿನ ತೋಟ, ಕುಡಿಯುವ ನೀರಿನ ಸುಂದರ ಬಾವಿ, ಧ್ವಜಸ್ತಂಭ, ಸುತ್ತಲೂ ಕಾಂಕ್ರೀಟ್ ರಸ್ತೆ ಹಾಗೂ ಇಡೀ ಪ್ರಾಂಗಣಕ್ಕೆ ಇಂಟರ್ ಲಾಕ್ ಅಳವಡಿಸಲಾಗಿದೆ.
ಪ್ರತ್ಯೇಕ ಘನತ್ಯಾಜ್ಯ ಘಟಕದ ನಿವೇಶನದಲ್ಲಿ 1.87 ಎಕರೆ ವಿಸ್ತೀರ್ಣದಲ್ಲಿ ಉಳಿಕೆ ಜಾಗದಲ್ಲಿ ಪಂಚಾಯತ್‌ನ ವತಿಯಿಂದ 520 ಗೇರು ಗಿಡ ಬೆಳಸಲಾಗಿದೆ.
ಸುಸಜ್ಜಿತವಾದ ಘನ ತ್ಯಾಜ್ಯ ಘಟಕ, ಹಳ್ಳಿಗಳ ಪ್ರತಿ ವಾರ್ಡ್‌ಗಳಲ್ಲಿ ಹಂತ-ಹಂತವಾಗಿ ಕಾಂಕ್ರೀಟ್ ರಸ್ತೆಗಳ ಸರ್ಮಾಣಗೊಂಡಿದೆ. ಕೃಷಿಕರಿಗಾಗಿ ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಂಡಿದೆ. ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ್ ಸಿಂಹ ನಾಯಕ್ ಇವರ ಅನುದಾನಗಳು ಅಭಿವೃದ್ಧಿಗೆ ಸಹಕಾರಿಯಾಗಿದೆ.
ಒಂಬತ್ತು ಸದಸ್ಯರನ್ನು ಹೊಂದಿರುವ ಕಡಿರುದ್ಯಾವರ ಪಂಚಾಯತ್‌ನಲ್ಲಿ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಅಭಿವೃದ್ಧಿಯಲ್ಲಿ ಉಳಿದ ಸದಸ್ಯರು ಸಾಥ್ ನೀಡುತ್ತಿದ್ದಾರೆ. ಅಭಿವೃದ್ಧಿ ಅಧಿಕಾರಿಯಾಗಿ ಜಯಕೀರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ.