ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟ ರಚನೆ ಸಂಬಂಧ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಬೆಳಗ್ಗೆ ಬೆಂಗಳೂರಿಗೆ ತಲುಪಲಿದ್ದಾರೆ.
ನಿನ್ನೆಯಿಂದ ವರಿಷ್ಠರ ಭೇಟಿಯಲ್ಲಿ ನಿರತರಾಗಿರುವ ಬೊಮ್ಮಾಯಿ, ಸಚಿವರ ಪಟ್ಟಿಗೆ ಗ್ರೀನ್ಸಿಗ್ನಲ್ ಪಡೆಯಲು ಹೈಕಮಾಂಡ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಕೇಂದ್ರ ಬಿಜೆಪಿ ನಾಯಕರ ಭೇಟಿ ಬಳಿಕ ದೆಹಲಿಯಲ್ಲಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸಂಜೆ ಅಂತಿಮವಾಗಿ ಸಂಪೂರ್ಣ ಮಾತುಕತೆ ನಡೆಸಿದ್ದೇವೆ. ನಾಳೆ ಬೆಳಗ್ಗೆ ಅಂತಿಮ ತೀರ್ಮಾನ ಹೇಳುವುದಾಗಿ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಅದರಂತೆ, ನಾಳೆ ಬೆಳಗ್ಗೆ ಶುಭ ಸೂಚನೆ ಸಿಗಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಹೈಕಮಾಂಡ್ ಅಂತಿಮ ತೀರ್ಮಾನ ಹೇಳಿದ ಬಳಿಕ ಪಟ್ಟಿ ಪ್ರಕಟ ಮಾಡುತ್ತೇವೆ. ನಾಳೆ ಮಧ್ಯಾಹ್ನ ಅಥವಾ ಸಂಜೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಡಿಸಿಎಂಗಳ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮವಾಗುತ್ತೆ. ವಿಜಯೇಂದ್ರಗೆ ಸ್ಥಾನಮಾನ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ. ಯಡಿಯೂರಪ್ಪ ಜೊತೆ ಚರ್ಚಿಸಿ ಹೈಕಮಾಂಡ್ ನಿರ್ಧರಿಸುತ್ತೆ. ಹಿರಿಯರಿಗೆ ಕೊಕ್ ನೀಡುವ ಬಗ್ಗೆಯೂ ವರಿಷ್ಠರೇ ನಿರ್ಧರಿಸ್ತಾರೆ. ನಾಯಕರು 2-3 ವಿಚಾರಗಳ ಬಗ್ಗೆ ನಾಳೆ ಬೆಳಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಾಳೆ ಪಕ್ಷದ ಯಾವುದೇ ವರಿಷ್ಠರನ್ನು ಭೇಟಿಯಾಗಲ್ಲ. ಪಕ್ಷದ ಹೈಕಮಾಂಡ್ ಫೋನ್ ಮೂಲಕವೇ ಮಾಹಿತಿ ನೀಡುತ್ತೆ. 2 ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.