ಕಾರ್ಕಳ : ರಾಜ್ಯ ಸರಕಾರ 6 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಈ ವರ್ಷ ನೇಮಕ ಮಾಡುತ್ತಿದ್ದು, ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ಶನಿವಾರ ಕಾರ್ಕಳ ಪೊಲೀಸ್ ವಸತಿ ಗೃಹ ಉದ್ಘಾಟಿಸಿ ಬಳಿಕ ಮಾತನಾಡಿದರು. ಮುಂದಿನ ಮೂರು ವರ್ಷದಲ್ಲಿ 16 ಸಾವಿರ ಪೊಲೀಸರ ನೇಮಕಾತಿಯಾಗಲಿದೆ. ನೇಮಕಾತಿ ವೇಳೆ ಶೇ. 25 ಮಹಿಳೆಯರಿಗೆ ಮತ್ತು ಶೇ. 2 ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗುವುದು ಎಂದರು.
ಪೊಲೀಸರಿಗೆ ಸಕಲ ಸೌಲಭ್ಯ
ಪೊಲೀಸರು ಸಮಾಜದ ಸ್ವಾಸ್ಥ್ಯ ಕಾಪಾಡುವವರು ಹಲವಾರು ಸವಾಲು, ಜವಾಬ್ದಾರಿಗಳ ಮಧ್ಯೆ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಮತ್ತವರ ಕುಟುಂಬಕ್ಕೆ ಸರಕಾರದಿಂದ ಸಕಲ ಸೌಲಭ್ಯ ಒದಗಿಸುವುದು ನಮ್ಮ ಗುರಿಯಾಗಿದೆ. ಇದರಿಂದ ಪೊಲೀಸರು ಹೆಚ್ಚು ದಕ್ಷತೆ, ಕಾರ್ಯಕ್ಷಮತೆ ಹೊಂದಲು ಸಾಧ್ಯವಾಗಲಿದೆ. ಸರಕಾರ ಈಗಾಗಲೇ 11 ಸಾವಿರ ಪೊಲೀಸ್ ಸಮುಚ್ಚಯ ನಿರ್ಮಾಣ ಮಾಡಿದ್ದು, ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದಲ್ಲಿ ವಸತಿ ನಿರ್ಮಾಣದಲ್ಲಿ ರಾಜ್ಯವೇ ಪ್ರಥಮ ಸ್ಥಾನದಲ್ಲಿದೆ ಎಂದು ಸಚಿವರು ಹೇಳಿದರು.
ಡ್ರಗ್ಸ್ ವಿರುದ್ಧ ಸಮರ
ರಾಜ್ಯದ ಪೊಲೀಸ್ ವ್ಯವಸ್ಥೆ ಡ್ರಗ್ಸ್ ಮಾರಾಟ, ವ್ಯಸನಿಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷೀಣ್ಯ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದೆ. ಡ್ರಗ್ಸ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮರ ಸಾರಿದ್ದು, ಕರ್ನಾಟಕದಲ್ಲಿ ಕಳೆದ ಹತ್ತು ವರ್ಷದಲ್ಲಿ ಸೀಜ್ ಮಾಡಿದಷ್ಟು ಪ್ರಮಾಣದ ಡ್ರಗ್ಸ್ ಅನ್ನು ನಮ್ಮ ಸರಕಾರ ಆಡಳಿತಕ್ಕೆ ಬಂದ 10 ತಿಂಗಳಲ್ಲಿ ಮಾಡಿದೆ. ಸಿಂಥೆಟಿಕ್ ಡ್ರಗ್ ಸಂಪೂರ್ಣ ನಿಯಂತ್ರಣದಲ್ಲಿದ್ದು, ಡಾರ್ಕ್ ವೆಬ್ ಭೇದಿಸಿದ್ದೇವೆ ಎಂದು ಸಚಿವರು ತಿಳಿಸಿದರು.
ಯುವ ಜನತೆ ದುಶ್ಚಟಗಳಿಗೆ ಬಲಿಯಾಗದಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಜಾಗೃತಿ ಮೂಡಿಸುವ ಕಾರ್ಯವಾಗಲಿದೆ. ಪೊಲೀಸ್ ಇಲಾಖೆಯೊಂದಿಗೆ ಆರೋಗ್ಯ, ಶಿಕ್ಷಣ ಇಲಾಖೆ ಕಾರ್ಯದಲ್ಲಿ ಕೈ ಜೋಡಿಸುವ ಮೂಲಕ ಯುವ ಜನತೆ ಮಾದಕ ವ್ಯಸನದಿಂದ ದೂರವುಳಿಯುವಂತೆ ಮಾಡಬೇಕಾಗಿದೆ ಎಂದರು.