ಮಂಗಳೂರು : ಮೂರು ದಿನಗಳ ಹಿಂದೆ ನಗರದ ಕೊಂಚಾಡಿ ದೇವಸ್ಥಾನ ಸಮೀಪ ಬಾಲಕರನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾವೂರಿನ ರಕ್ಷಕ್ ಶೆಟ್ಟಿ (22), ಬೊಂದೆಲ್‌ನ ಅಲಿಸ್ಟರ್ ತಾವ್ರೋ (21), ಕಾವೂರು ಕೈಒಸಿಎಲ್ ಕ್ವಾರ್ಟರ್ಸ್‌ನ ರಾಹುಲ್ ಸಿನ್ಹಾ (21) ಬಂಧಿತ ಆರೋಪಿಗಳು.
ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜ.13ರಂದು ಸಂಜೆ 7 ಗಂಟೆ ಸುಮಾರಿಗೆ ನಾಲ್ವರು ಬಾಲಕರು ಕೊಂಚಾಡಿ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಯತ್ತ ತೆರಳುತ್ತಿದ್ದರು. ಮೂವರು ಬಾಲಕರು ದೇವಳ ಪ್ರಾಂಗಣ ದಾಟಿ ಎದುರು ರಸ್ತೆಯಲ್ಲಿ ತೆರಳುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ರಸ್ತೆ ಬದಿ ನಿಂತಿದ್ದರು. ಆ ಪೈಕಿ ಓರ್ವ ಎದುರಿನಲ್ಲಿ ಹೋಗುತ್ತಿದ್ದ ಬಾಲಕನಿಗೆ ಗೋಣಿ ಚೀಲ ಮುಸುಕು ಹಾಕಲು ಯತ್ನಿಸಿದ್ದಾನೆ. ಬಾಲಕ ಆತನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದನು. ಬಳಿಕ ದುಷ್ಕರ್ಮಿಯು ಕೂಡಲೇ ಇನ್ನೊಬ್ಬ ಬಾಲಕನಿಗೆ ಮುಸುಕು ಹಾಕಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಹಿಂದಿನಿಂದ ಬರುತ್ತಿದ್ದ ಮತ್ತೋರ್ವ ಬಾಲಕ ಅಪಹರಣಕಾರರತ್ತ ಕಲ್ಲು ಹೆಕ್ಕಿ ಎಸೆದ್ದಾನೆ. ಅಷ್ಟರಲ್ಲಿ ಅಪಾಯ ಅರಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು ಎಂದರು.






