ಕೊರೋನಾ ಎರಡನೇ ಅಲೆಯಲ್ಲಿ ಜನರು ಸೋಂಕಿನಿಂದ ನರಳುತ್ತಿದ್ದರೇ ಸಾವಿನ ಸಂಖ್ಯೆಯೂ ಹೆಚ್ಚಿದೆ. ಈ ಮಧ್ಯೆ ಮಾಸ್ಕ್ ಬದುಕಿನ ಅವಿಭಾಜ್ಯ ಅಂಗದಂತಾಗಿದೆ. ಆದರೆ ಕಳೆದ ಒಂದು ವರ್ಷಗಳಿಂದ ಬಳಕೆಯಾಗ್ತಿರೋ ತರೇಹವಾರಿ ಮಾಸ್ಕ್ ಗಳನ್ನು ವಿಲೇವಾರಿ ಮಾಡೋದೆ ದೊಡ್ಡ ತಲೆನೋವು. ಮಾಸ್ಕ್ ನಿಂದಲೇ ಹೊಸ ರೋಗ ಹುಟ್ಟದಿದ್ದರೇ ಸಾಕು ಅನ್ನೋ ಆತಂಕ ಕಾಡುತ್ತಿರುವಾಗಲೇ ಮಂಗಳೂರಿನ ಯುವಕನೊಬ್ಬ ಬಳಸಿ ಬಿಸಾಡಿದ್ರೆ ಗಿಡವಾಗೋ ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿ ಗಮನ ಸೆಳೆದಿದ್ದಾನೆ.
ಮಾಸ್ಕ್ ಅನಿವಾರ್ಯವಾಗುತ್ತಿದ್ದಂತೆ ವಿವಿಧ ಬಣ್ಣ,ಬಟ್ಟೆ,ಪ್ಲಾಸ್ಟಿಕ್ ಸೇರಿದಂತೆ ನೂರಾರು ವೈರೈಟಿ,ದರ ಹಾಗೂ ವಿಶೇಷತೆಗಳ ಮಾಸ್ಕ್ ಮಾರುಕಟ್ಟೆಗೆ ಕಾಲಿಟ್ಟಿದೆ. ಆದರೆ ಈ ಮಾಸ್ಕ್ ಗಳು ನಿರ್ವಹಣೆ ಹಾಗೂ ಮರುಬಳಕೆಯೇ ದೊಡ್ಡ ಸವಾಲು. ಈ ಮಾಸ್ಕ್ ಗಳೇ ಹೊಸ ತ್ಯಾಜ್ಯ ಸೃಷ್ಟಿಸುವ ಸ್ಥಿತಿ ಎದುರಾಗುತ್ತಿದೆ.
ಇಂತ ಹೊತ್ತಿನಲ್ಲೇ ಮಂಗಳೂರಿನ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಉತ್ಸಾಹಿ ಯುವಕ ನಿತಿನ್ ವಾಸ್ ಬಳಸಿ ಬಿಸಾಡಿದ ಬಳಿಕ ಹಸಿರು ಗಿಡವಾಗೋ ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿ ಗಮನ ಸೆಳೆದಿದ್ದಾರೆ. ಸಸ್ಯದ ಬೀಜಗಳನ್ನು ಬಳಸಿ ಹತ್ತಿಯಿಂದ ಈ ಮಾಸ್ಕ್ ತಯಾರಿಸಲಾಗಿದ್ದು, ಇದನ್ನು ಬಳಸಿ ಬಿಸಾಡಿದ್ರೆ ಗಿಡವಾಗಿ ಪರಿಸರದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
ಹಣ್ಣು-ಹೂವಿನ ಗಿಡದ ಬೀಜಗಳನ್ನು ಹತ್ತಿಯೊಂದಿಗೆ ಬೆರೆಸಿ ನೀರಿನಲ್ಲಿ ನೆನೆಸಿ, ಬಳಿಕ ಅದನ್ನು ಪೇಪರ್ ರೂಪಕ್ಕೆ ತಂದು 12 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಕಾಟನ್ ಬಟ್ಟೆ, ಕಾಟನ್ ದಾರ ಬಳಸಿ ಮಾಸ್ಕ್ ಸಿದ್ಧಪಡಿಸಲಾಗುತ್ತದೆ. ಒಮ್ಮೆ ಬಳಸಿ ಬಿಸಾಡುವ ಈ ಮಾಸ್ಕ್ ಒಂದಕ್ಕೆ 25 ರೂಪಾಯಿ ದರವಿದೆ.
ಇದು ಕಾಟನ್ ಬಟ್ಟೆ ಹಾಗೂ ಹತ್ತಿಯನ್ನು ಒಳಗೊಂಡಿರೋದರಿಂದ ಬಳಕೆಗೂ ಲೈಟ್ ಎನ್ನಿಸುವಂತಿದ್ದು, ಬಳಸಿದ ಬಳಿಕ ಪರಿಸರಕ್ಕೂ ಪೂರಕವಾಗಿಯೇ ಡಿಸ್ಪೋಸ್ ಆಗಲಿದೆ. ಸದ್ಯ 3 ಸಾವಿರ ಮಾಸ್ಕ್ ಉತ್ಪಾದಿಸಿರುವ ನಿತಿನ್ ವಾಸ್ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸುವ ಚಿಂತನೆಯಲ್ಲಿದ್ದಾರೆ.
ನಿತಿನ್ ವಾಸ್ ಹಾಗೂ ಸ್ನೇಹಿತರು ಪೇಪರ್ ಸೀಡ್ ಎಂಬ ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವ ಉದ್ಯಮವನ್ನು ಹೊಂದಿದ್ದಾರೆ. 2017 ರಲ್ಲಿ ಆರಂಭವಾದ ಈ ಸಂಸ್ಥೆ ಹಳ್ಳಿಯ ಮಹಿಳೆಯರಿಗೆ ಉದ್ಯೋಗ ಒದಗಿಸಿ ಮುನ್ನಡೆಯುತ್ತಿತ್ತು. ಆದರೆ ಲಾಕ್ ಡೌನ್ ಈ ಸಂಸ್ಥೆಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತ್ತು. ‘
ಹೀಗಾಗಿ ಮಾಸ್ಕ್ ನ್ನು ಪರಿಸರ ಸ್ನೇಹಿಯಾಗಿ ಸಿದ್ಧಪಡಿಸುವ ಪ್ರಯತ್ನಕ್ಕೆ ಕೈಹಾಕಿದ ಯುವಕರು ಈಗ ಯಶಸ್ವಿಯಾಗಿದ್ದಾರೆ. ಸಂಪೂರ್ಣ ಹ್ಯಾಂಡ್ ಮೇಡ್ ಆಗಿರುವ ಈ ಮಾಸ್ಕ್ ಗೆ ಚೈನೈ,ಗುಜರಾತ,ಮುಂಬೈ ಸೇರಿದಂತೆ ಹಲವೆಡೆಯಿಂದ ಬೇಡಿಕೆ ಇದ್ದು, ಅಂದಾಜು 2 ಲಕ್ಷ ಮಾಸ್ಕ್ ಉತ್ಪಾದನೆಗೆ ನಿತಿನ್ ವಾಸ್ ಹಾಗೂ ತಂಡ ಸಜ್ಜಾಗಿದೆ.
ಕೊರೋನಾ ಜೊತೆಗೆ ಬದುಕಬೇಕಾದ ಸಂದಿಗ್ಧದಲ್ಲಿರೋ ಮನುಷ್ಯನಿಗೆ ಇನ್ನಷ್ಟು ವರ್ಷ ಮಾಸ್ಕ್ ಬಳಕೆ ಅನಿವಾರ್ಯ. ಹೀಗಾಗಿ ಮುಂದೊಂದು ದಿನ ಮಾಸ್ಕ್ ನಿರ್ಮೂಲನೆಯೇ ದೊಡ್ಡ ಸಮಸ್ಯೆಯಾಗಿ ಕಾಡೋ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆ ಸಮಸ್ಯೆಯನ್ನು ತಡೆಯಲು ಈ ಪರಿಸರ ಸ್ನೇಹಿ ಮಾಸ್ಕ್ ಉತ್ತರವಾಗಿದ್ದು, ಜನರು ಇಂಥ ಮಾಸ್ಕ್ ಬಳಕೆಗೆ ಮುಂಧಾಗೋ ಮೂಲಕ ಪರಿಸರ ರಕ್ಷಣೆಯ ಪ್ರಯತ್ನಕ್ಕೆ ಜೀವತುಂಬಬೇಕಿದೆ.