ನವದೆಹಲಿ: ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ 2020 ಪ್ರಕಟಗೊಂಡಿದ್ದು, ಸ್ವಚ್ಛ ಸರ್ವೇಕ್ಷಣೆಯಲ್ಲಿ ಛತ್ತೀಸ್‌ಗಢದ ಅಂಬಿಕಾಪುರಕ್ಕೆ ಅಗ್ರ ಸ್ಥಾನ ದೊರೆತಿದ್ರೆ, ನಮ್ಮ ದೇಶದ 3 ರಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಮೈಸೂರು ಪಡೆದಿದೆ.
ಹೌದು, ಸತತ 2 ಬಾರಿ ದೇಶದ ಸ್ವಚ್ಛ ನಗರಿ ಎಂಬ ಬಿರುದು ಪಡೆದ ನಮ್ಮ ಸಾಂಸ್ಕೃತಿಕ ನಗರಿ ಮೈಸೂರು ಇದೀಗ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಅಂದ್ಹಾಗೆ, ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಇದೇ ಜನವರಿ ತಿಂಗಳಿನಲ್ಲಿ ಮೈಸೂರು ಸುತ್ತಮುತ್ತ ಸರ್ವೇಕ್ಷಣಾ ಸರ್ವೇ ನಡೆಸಲಾಗಿತ್ತು. ಈ ಸ್ಫರ್ಧೆಯಲ್ಲಿ 4400ಕ್ಕೂ ಹೆಚ್ಚು ನಗರಗಳು ಭಾಗವಹಿಸಿದ್ದವು. ಛತ್ತೀಸ್‌ಗಢ ರಾಜ್ಯದ ಅಂಬಿಕಾಪುರ್ ನಗರ 5428.31 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದೆ. 5298.61 ಅಂಕ ಗಳಿಸಿದ ಮೈಸೂರು ದ್ವಿತೀಯ ಸ್ಥಾನ ಪಡೆದಿದೆ.






