
ಬೆಂಗಳೂರು: ಕೃಷ್ಣ ಬೆಳ್ತಂಗಡಿ ನಿರ್ದೇಶನದ ‘ಇದು ನಮ್ ಶಾಲೆ’ ಚಿತ್ರ ಇದೇ ನವೆಂಬರ್ 29ಕ್ಕೆ ತೆರೆಗೆ ಬರುತ್ತಿದೆ. ರವಿ ಆಚಾರ್ ನಿರ್ಮಾಣದ ಈ ಚಿತ್ರದಲ್ಲಿ ಪುಣ್ಯ, ಪೂಜ್ಯಾ, ಪೂಜಾ ಸುಮನ್, ವಾಣಿ ಗೌಡ, ಶಂಕರ್ ಭಟ್, ಈಶ್ವರದಳ, ಮಲ್ಲಿಕಾರ್ಜುನ್ ತುಮಕೂರು ರಾಜು ನಾಯಕ್ ಮುಂತಾದವರು ನಟಿಸಿದ್ದಾರೆ.
ವಿಶೇಷವಾಗಿ ಶಾಸಕ ಶಿವಲಿಂಗೇಗೌಡ ರವರು ಈ ಚಿತ್ರದಲ್ಲಿ ಮುಖ್ಯಮಂತ್ರಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೆಸರೇ ಹೇಳುವಂತೆ ಇದು ಶಾಲೆ, ವಿದ್ಯೆ ಮತ್ತು ಮಕ್ಕಳ ಸುತ್ತ ನಡೆಯುವ ಕಥೆಯಾಗಿದೆ.
ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಕೃಷ್ಣ ಬೆಳ್ತಂಗಡಿ, ‘ಇದು ನನ್ನ ಮೂರನೇ ಸಿನಿಮಾ. ‘ಇದು ನಮ್ ಶಾಲೆ’ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸವನ್ನು ಹೇಳುವ ಕಥೆ ಇಲ್ಲಿದೆ. ಅಂದರೆ ಸರ್ಕಾರಿ ಶಾಲೆಯ ಸಮಸ್ಯೆಗಳ ಬಗ್ಗೆ ಹೋರಾಡುವ ಇಬ್ಬರ ಶಾಲಾ ವಿದ್ಯಾರ್ಥಿಗಳ ಕಥೆಯನ್ನು ಒಳಗೊಂಡ ಸಿನಿಮಾ ಇದು. ಅವರ ಹೋರಾಟ ಹೇಗಿರುತ್ತದೆ, ಆ ಹೋರಾಟದಿಂದ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಮುಂದೆ ಆ ಸರ್ಕಾರಿ ಶಾಲೆಗೆ ಏನೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ’ ಎಂದರು.ಹಿತನ್ ಹಾಸನ್ ಸಂಗೀತ, ನಾಗರಾಜ ಅದವಾನಿ ಛಾಯಾಗ್ರಹಣ ಚಿತ್ರಕ್ಕಿದೆ. ಜಿ ಎಸ್ ಫಿಲಂಸ್ ಮೂಲಕ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಲಾಗುತ್ತಿದೆ. ಅರಸೀಕೆರೆ ಉಮೇಶ್ ಅವರು ಚಿತ್ರದ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ.
