ಬೆಂಗಳೂರು: ಬೆಳ್ತಂಗಡಿ ತಾಲೂಕಿನ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಬುಡಕಟ್ಟು ಸಮುದಾಯದ ಕಾಲೋನಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 3 (2) ಅನ್ವಯ ಮೂಲಭೂತ ಸೌಲಭ್ಯ ಕಲ್ಪಿಸಲು ಅವಕಾಶ ಕಲ್ಪಿಸಬೇಕೆಂದು ಶಾಸಕ ಹರೀಶ್ ಪೂಂಜ ರವರು ಅರಣ್ಯ ಸಚಿವರಾದ ಆನಂದ್ ಸಿಂಗ್ ರವರನ್ನು ಭೇಟಿಯಾಗಿ ಮನವಿ ಮಾಡಿದರು.
ತಾಲೂಕಿನಲ್ಲಿ ವಿದ್ಯುತ್ ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಅನುಮತಿ ಪಡೆಯಬೇಕು ಎಂದು ಹೇಳುತ್ತಿರುವುದರಿಂದ. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಾಸಕರು ಸಮುದಾಯದ ಮುಖಂಡರು ಮತ್ತು ತಜ್ಞರ ಸಭೆ , ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಯನ್ನು ಬೆಳ್ತಂಗಡಿಯಲ್ಲಿ ನಡೆಸಿದ್ದರು ಅಧಿವೇಶನದಲ್ಲಿ ಶಾಸಕರು ಎತ್ತಿದ ಪ್ರಶ್ನೆಗೆ ಉತ್ತರ ಒದಗಿಸಲು ಅರಣ್ಯ ಇಲಾಖೆ ಸಮಯವನ್ನು ಕೇಳಿತ್ತು.
ದಿನಾಂಕ 07-07-2020 ರಂದು ಮಾನ್ಯ ಉಪ ಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯ ಹಕ್ಕು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಬೆಳ್ತಂಗಡಿಯ ಸಮಸ್ಯೆಯ ಬಗ್ಗೆ ಪ್ರಸ್ತಾಪವಾಗಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಆದರೂ ಕೂಡ ಅರಣ್ಯ ಇಲಾಖೆ ಯಾವುದೇ ರೀತಿಯ ಆದೇಶ ಹೊರಡಿಸಿರಲಿಲ್ಲ. ಅರಣ್ಯ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿ ಅರಣ್ಯ ಹಕ್ಕು ಕಾಯ್ದೆಯ ಸೆಕ್ಷನ್ 3 (2) ಅನ್ವಯ ಮೂಲಭೂತ ಸೌಲಭ್ಯ ಕಲ್ಪಿಸುವಾಗ ವನ್ಯಜೀವಿ ಮಂಡಳಿಯ ಅನುಮತಿ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಬೇಕಾಗಿದೆ ಎಂದು ಅರಣ್ಯ ಸಚಿವರಲ್ಲಿ ಶಾಸಕರು ಮನವಿ ಮಾಡಿಕೊಂಡರು.