ಬೆಂಗಳೂರು: ಮಾರಣಾಂತಿಕ ನಿಫಾ ವೈರಸ್ ಸೋಂಕಿಗೆ ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಮೃತ ಯುವಕನ ಟ್ರಾವೆಲ್ ಹಿಸ್ಟ್ರಿ ಬೆಚ್ಚಿ ಬೀಳಿಸುವಂತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗೂ ಆತಂಕ ಎದುರಾಗಿದೆ.ಕೇರಳದ ಮಲಪ್ಪುರಂ ಮೂಲದ 23 ವರ್ಷದ ವಿದ್ಯಾರ್ಥಿ ನಿಫಾ ಸೋಂಕಿನಿಂದ ಮೃತಪಟ್ಟಿರುವುದು ದೃಢವಾಗಿದೆ.
ಕಾಲಿಗೆ ಪೆಟ್ಟುಬಿದ್ದ ಕಾರಣ ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ವಿದ್ಯಾರ್ಥಿ, ಸೆ.5ರಂದು ಆಸ್ಪತ್ರೆಗೆ ದಾಖಲಾಗಿದ್ದ. ತಪಾಸಣೆ ವೇಳೆ ಯುವಕನಿಗೆ ನಿಫಾ ವೈರಸ್ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸೆ.8ರಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದ.
ಯುವಕನ ಅಂತ್ಯಕ್ರಿಯಲ್ಲಿ ಬೆಂಗಳೂರಿನ ಆತನ ಸ್ನೇಹಿತರು 15 ಜನ ವಿದ್ಯಾರ್ಥಿಗಳು ಸೇರಿದಂತೆ 115 ಜನರು ಭಾಗಿಯಾಗಿದ್ದರು. ಬೆಂಗಳೂರಿನ 15 ವಿದ್ಯಾರ್ಥಿಗಳು ಮೃತ ಯುವಕನ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಮೃತ ಯುವಕನ ಅಂತ್ಯಕ್ರಿಯೆಯಲ್ಲಿ ಭಾಗಿಯಾದವರನ್ನು ಐಸೋಲೇಷನ್ ಮಾಡಿದ್ದು, ಬೆಂಗಳೂರಿನ 15 ವಿದ್ಯಾರ್ಥಿಗಳನ್ನು ಕೂಡ ಐಸೊಲೇಷನ್ ಗೆ ಒಳಪಡಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.